ನಾಗ್ಪುರ (ಮಹಾರಾಷ್ಟ್ರ),ಅ.31: ಕೆಲವರಿಗೆ ಡಿಜಿಟಲ್ ತಂತ್ರಜ್ಞಾನದ ಅಲಭ್ಯತೆಯಿಂದಾಗಿ ಕೊರೋನ ವೈರಸ್ ಸಾಂಕ್ರಾಮಿಕವು ಅನಿವಾರ್ಯವಾಗಿಸಿದ ನ್ಯಾಯಾಲಯಗಳ ಆನ್‌ಲೈನ್ ಕಲಾಪಗಳು ಅಸಮಾನತೆಯನ್ನು ಸೃಷ್ಟಿಸಿವೆ ಮತ್ತು ಇದು ನಿವಾರಣೆಯಾಗುವ ಅಗತ್ಯವಿದೆ ಎಂದು ಭಾರತದ ಮುಖ್ಯ ನ್ಯಾಯಾಧೀಶ ಎಸ್.ಎ.ಬೋಬ್ಡೆ ಅವರು ಶನಿವಾರ ಇಲ್ಲಿ ಹೇಳಿದರು. ಇದೇ ವೇಳೆ,ಸಾಂಕ್ರಾಮಿಕದ ನಡುವೆಯೂ ದೇಶದಲ್ಲಿಯ ನ್ಯಾಯಾಲಯಗಳು ಕಾರ್ಯನಿರತವಾಗಿದ್ದು ತನಗೆ ಹೆಮ್ಮೆಯನ್ನುಂಟು ಮಾಡಿದೆ ಎಂದರು.
ಅವರು ನ್ಯಾಯಾಂಗ ಅಧಿಕಾರಿಗಳ ತರಬೇತಿ ಸಂಸ್ಥೆಯಲ್ಲಿ ಮಹಾರಾಷ್ಟ್ರ ಸಾರಿಗೆ ಇಲಾಖೆಗಾಗಿ ನ್ಯಾಯಕೌಶಲ ಇ-ಸಂಪನ್ಮೂಲ ಕೇಂದ್ರ ಮತ್ತು ವರ್ಚುವಲ್ ಕೋರ್ಟ್ ಉದ್ಘಾಟಿಸಿ ಮಾತನಾಡುತ್ತಿದ್ದರು.
ನ್ಯಾಯಕೌಶಲ ಕೇಂದ್ರವು ದೇಶದ ಯಾವುದೇ ನ್ಯಾಯಾಲಯದಲ್ಲಿ ಪ್ರಕರಣಗಳನ್ನು ಇ-ಫೈಲ್ ಮಾಡಲು ಸೌಲಭ್ಯವನ್ನೊದಗಿಸುವ ಮೊದಲ ಇ-ಸಂಪನ್ಮೂಲ ಕೇಂದ್ರವಾಗಿದೆ.
ಕೊರೋನ ವೈರಸ್ ಪಿಡುಗು ಆರಂಭವಾದ ಬಳಿಕ ನ್ಯಾಯಾಲಯಗಳು ತಮ್ಮ ಕೆಲಸ ಮುಂದುವರಿಸಿದ್ದರೂ,ನ್ಯಾಯವನ್ನು ಪಡೆಯುವುದು ತಂತ್ರಜ್ಞಾನವನ್ನು ಅವಲಂಬಿಸಿತ್ತು. ಇದು ತಂತ್ರಜ್ಞಾನವನ್ನು ಬಳಸಲು ಸಾಧ್ಯವಿದ್ದವರು ಮತ್ತು ಸಾಧ್ಯವಿಲ್ಲದವರ ನಡುವೆ ವ್ಯತ್ಯಾಸವನ್ನುಂಟು ಮಾಡಿದ್ದು,ಇದು ಅನುದ್ದಿಷ್ಟ ಅಸಮಾನತೆಯನ್ನು ಸೃಷ್ಟಿಸಿದೆ. ವೃತ್ತಿ ಅವಕಾಶಗಳ ಅಲಭ್ಯತೆಯಿಂದಾಗಿ ಕೆಲವು ವಕೀಲರು ತರಕಾರಿ ವ್ಯಾಪಾರಕ್ಕೆ ಇಳಿಯುವಂತಾಗಿತ್ತು. ಇನ್ನು ಕೆಲವರು ತಮ್ಮ ವೃತ್ತಿಗೆ ಇತಿಶ್ರೀ ಹೇಳಲು ಮತ್ತು ಇನ್ನು ಕೆಲವರು ತಮ್ಮ ಬದುಕಿಗೇ ಅಂತ್ಯ ಹಾಡಲು ಬಯಸಿದ್ದರು ಎನ್ನುವುದನ್ನು ತನ್ನ ಗಮನಕ್ಕೆ ತರಲಾಗಿದೆ. ಹೀಗಾಗಿ ತಂತ್ರಜ್ಞಾನ ಎಲ್ಲೆಡೆ ಲಭ್ಯವಾಗುವಂತೆ ಮಾಡುವುದು ಮುಖ್ಯವಾಗಿದೆ ಎಂದು ನ್ಯಾ.ಬೋಬ್ಡೆ ಹೇಳಿದರು.
ಕೆಲವು ರಾಜ್ಯಗಳು ವೈ-ಫೈ ಸಂಪರ್ಕವನ್ನು ಒದಗಿಸುವ ಮೊಬೈಲ್ ವ್ಯಾನ್‌ಗಳನ್ನು ಪರಿಚಯಿಸಿದ್ದು,ಇದನ್ನು ಕಕ್ಷಿದಾರರು ಮತ್ತು ವಕೀಲರು ಬಳಸಿಕೊಳ್ಳಬಹುದು ಎಂದ ಅವರು,ಇಂದು ಉದ್ಘಾಟನೆಗೊಂಡಿರುವ ಇ-ಕೇಂದ್ರವು ಈ ನಿಟ್ಟಿನಲ್ಲಿ ಒಂದು ಹೆಜ್ಜೆಯಾಗಿದೆ. ಇಂತಹ ಇನ್ನಷ್ಟು ಕೇಂದ್ರಗಳು ಆರಂಭವಾಗಲಿವೆ. ತಂತ್ರಜ್ಞಾನ ಲಭ್ಯತೆಯ ಕೊರತೆಯಿಂದಾಗಿ ಸೃಷ್ಟಿಯಾಗಿರುವ ಅಸಮಾನತೆಯ ನಿವಾರಣೆಗಾಗಿ ಈ ಕೆಲಸವನ್ನು ಸಮರೋಪಾದಿಯಲ್ಲಿ ಮಾಡಬೇಕಿದೆ ಎಂದರು.
ಮೊದಲು ತಾವು ನ್ಯಾಯಾಲಯಗಳಿಗೆ ಹಾಜರಾಗುತ್ತಿರುವಾಗ ತಮ್ಮನ್ನು ಗಮನಿಸಲಾಗುತ್ತಿತ್ತು ಮತ್ತು ತಮಗೆ ಕೆಲಸ ದೊರೆಯುತ್ತಿತ್ತು,ಆದರೆ ನ್ಯಾಯಾಲಯಗಳ ಆನ್‌ಲೈನ್ ಕಲಾಪಗಳಿಂದಾಗಿ ಇದು ಸಾಧ್ಯವಾಗುತ್ತಿಲ್ಲ ಎಂದು ಕಿರಿಯ ವಕೀಲರು ಹೇಳುತ್ತಿದ್ದಾರೆ. ಆನ್‌ಲೈನ್ ಸ್ಕ್ರೀನ್‌ಗಳಲ್ಲಿ ಹಿರಿಯ ನ್ಯಾಯವಾದಿಗಳು ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ ಮತ್ತು ಇದರಿಂದಾಗಿ ಕಿರಿಯ ವಕೀಲರಿಗೆ ವೃತ್ತಿ ಅವಕಾಶಗಳು ಕಡಿಮೆಯಾಗುತ್ತಿವೆ ಎಂದು ನ್ಯಾ.ಬೋಬ್ಡೆ ಹೇಳಿದರು.