ಕಾಸರಗೋಡು: ಕೋವಿಡ್ ವ್ಯಾಪಕತೆಯ ಹಿನ್ನೆಲೆಯಲ್ಲಿ ಕಳೆದ 9 ತಿಂಗಳುಗಳ ಹಿಂದೆ ಸ್ಥಗಿತಗೊಂಡಿದ್ದ ಕಾಸರಗೋಡು-ಮಂಗಳೂರು ಕೆಎಸ್‍ಆರ್‍ಟಿಸಿ ಬಸ್ ಸೇವೆ ಸೋಮವಾರ ಪುನರಾರಂಭಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ. ಹಲವು ಕಾಲಗಳಿಂದ ಸಂಪೂರ್ಣ ನಿಲುಗಡೆಗೊಂಡಿರುವ ಹೆದ್ದಾರಿಯ ಅಂತರ್ ರಾಜ್ಯ ಬಸ್ ಸೇವೆ ಪುನರಾರರಂಭಗೊಳ್ಳದೆ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು, ರಾಜಕೀಯ ಪಕ್ಷಗಳು ಪ್ರತಿಭಟನೆ ನಡೆಸಿದ್ದರ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಕಾಸರಗೋಡು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಸರ್ಕಾರದ ಅಂತರರಾಜ್ಯ ಹೆದ್ದಾರಿಯಾಗಿದೆ. ಕೆಎಸ್‍ಆರ್‍ಟಿಸಿಗೆ ಮಂಗಳೂರು ಸೇವೆ ತಿಂಗಳುಗಟ್ಟಲೆ ಅಸ್ತವ್ಯಸ್ತಗೊಂಡಿದ್ದು, ಸರ್ಕಾರಕ್ಕೆ ಭಾರಿ ನಷ್ಟವಾಗಿದೆ. ಪ್ರಯಾಣಿಕರು ತಲಪ್ಪಾಡಿಯಿಂದ ಮಂಗಳೂರು ತಲುಪಲು ಇತರ ಬಸ್ಸುಗಳನ್ನು ಬಳಸುತ್ತಿದ್ದು ಭಾರೀ ತೊಡಕುಗಳುಂಟಾಗುತ್ತಿತ್ತು. ಆದರೆ ಸುಧೀರ್ಘ ಕಾಲದ ಇಂತಹದೊಂದು ಸಮಸ್ಯೆ ಸೋಮವಾರ ಕೊನೆಗೊಳ್ಳುತ್ತದೆ ಎಂದು ನಿರೀಕ್ಷಿಸಲಾಗಿದೆ.
ಈ ಮಧ್ಯೆ ಇತರ ಅಂತರ್ ರಾಜ್ಯ ಗಡಿಗಳಾದ ಅಡ್ಕಸ್ಥಳ-ಪುತ್ತೂರು, ಜಾಲ್ಸೂರು ಸುಳ್ಯ, ಬಾಯಾರು ವಿಟ್ಲ ಮೊದಲಾದ ರಸ್ತೆಗಳ ಅಂತರ್ ರಾಜ್ಯ ಬಸ್ ಸೇವೆ ಯಾವಾಗ ಪ್ರಾರಂಭಗೊಳ್ಳುವುದೆಂಬ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ.