ಶಬರಿಮಲೆ : ವಾರ್ಷಿಕ ಮಂಡಲ ಪೂಜೆ ಸಲ್ಲಿಸಲು ಕೇರಳದ ಶಬರಿಮಲೆ ದೇವಾಲಯಕ್ಕೆ ಭಕ್ತರು ಆಗಮಿಸುತ್ತಿದ್ದಾರೆ. ಸಾಮಾಜಿಕ ಅಂತರ ಕಾಪಾಡುವುದು, ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ.
ಕೋವಿಡ್ ಭೀತಿಯ ನಡುವೆಯೇ ಶಬರಿಮಲೆಯಲ್ಲಿ ಭಕ್ತರ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ದೇವಾಲಯದ ಸ್ವಯಂ ಸೇವಕರು ಭಕ್ತರು ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಎಚ್ಚರ ವಹಿಸಿದ್ದಾರೆ.
ಕೋವಿಡ್ ಮಾರ್ಗಸೂಚಿಯ ಹಿನ್ನಲೆಯಲ್ಲಿ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ದೇವಾಲಯದ ಆವರಣದಲ್ಲಿ ಭಕ್ತರ ಸಂಖ್ಯೆ ಕಡಿಮೆ ಇದೆ. ಸುಮಾರು 7 ತಿಂಗಳ ಬಳಿಕ ದೇವಾಲಯಕ್ಕೆ ಭಕ್ತರಿಗೆ ಪ್ರವೇಶ ನೀಡಲಾಗಿದೆ.
ಶಬರಿಮಲೆ ಅಯ್ಯಪ್ಪನ ದರ್ಶನಕ್ಕೆ ಬರುವ ಭಕ್ತರಿಗೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಪ್ರತಿದಿನ 250 ಭಕ್ತರಿಗೆ ಮಾತ್ರ ದರ್ಶನಕ್ಕೆ ಅವಕಾಶ ಕೊಡಲಾಗಿದೆ.
ಕೇರಳದಲ್ಲಿ ಬುಧವಾರ ಅತಿ ಹೆಚ್ಚು ಎಂದರೆ 6,419 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದ್ದವು. ರಾಜ್ಯದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 5,57,442ಕ್ಕೆ ಏರಿಕೆಯಾಗಿದೆ.
ಭಕ್ತರು ಶಬರಿಮಲೆ ದೇವಾಲಯದ ಬೇಸ್ ಕ್ಯಾಂಪ್ ತಲುಪುವ 24 ಗಂಟೆಗಳ ಮೊದಲು ಕೋವಿಡ್ ನೆಗೆಟಿವ್ ವರದಿಯನ್ನು ಹೊಂದಿರಬೇಕು. ಅಲ್ಲಿ ಮತ್ತೊಮ್ಮೆ ಪರೀಕ್ಷೆಗೆ ಬಯಸಿದರೆ ಅದಕ್ಕೂ ಸಹ ವ್ಯವಸ್ಥೆ ಮಾಡಲಾಗಿದೆ.
ಶಬರಿಮಲೆಯಲ್ಲಿ ನಡೆಯುವ 62 ದಿನಗಳ ವಿಶೇಷ ಪೂಜೆ ಸಮಯದಲ್ಲಿ ಲಕ್ಷಾಂತರ ಭಕ್ತರು ಪ್ರತಿ ವರ್ಷ ಭೇಟಿ ನೀಡುತ್ತಿದ್ದವು. ಈ ಬಾರಿ 85 ಸಾವಿರ ಭಕ್ತರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ ಎಂದು ಆಡಳಿತ ಮಂಡಳಿ ತಿಳಿಸಿದೆ.