ಕುಂಬಳೆ: ಯಕ್ಷಗಾನದ ಪಿತಾಮಹ, ಯಕ್ಷ ಕವಿ ಪಾರ್ತಿಸುಬ್ಬ ಇವರ ಹುಟ್ಟೂರಾದ ಕುಂಬ್ಳೆಯ ಪೆÇೀಲಿಸ್ ಸ್ಟೇಷನ್ ಬಳಿ ಕುಂಬಳೆ ಗ್ರಾ.ಪಂ. ಮುತುವರ್ಜಿಯಿಂದ 3.50 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ 2.5 ಕಿ.ಮೀ ಉದ್ದದ ನೂತನ ರಸ್ತೆಗೆ ಯಕ್ಷ ಕವಿ ಪಾರ್ತಿಸುಬ್ಬ ರಸ್ತೆ ಎಂಬುದಾಗಿ ಕೇರಳ ಸರ್ಕಾರವು ಕುಂಬ್ಳೆ ಗ್ರಾಮ ಪಂಚಾಯತಿ ಮೂಲಕ ಅಧಿಕೃತವಾಗಿ ಘೋಷಣೆ ಮಾಡಿದ್ದು, ಶುಕ್ರವಾರ ನಾಮ ಫಲಕ ಅನಾವರಣ ನಡೆಯಿತು.
ಪಾರ್ತಿಸುಬ್ಬರು ಯಕ್ಷಗಾನವನ್ನು ಪುನಶ್ಚೇತನಗೊಳಿಸಿ ಹೊಸ ಅಯಾಮಗಳೊಮದಿಗೆ ಯಕ್ಷ ಪಿತಾಮಹ ಎನಿಸಿಕೊಂಡವರು. ಆದರೆ ಅವರ ಹುಟ್ಟೂರಲ್ಲಿ ಅವರ ಬಗೆಗಿನ ಯಾವೊಂದು ಸ್ಮಾರಕಗಳೂ ಇಲ್ಲದಿರುವುದರಿಂದ ಯಕ್ಷಧ್ರುವ ಪಟ್ಲ ಪೌಂಡೇಶನ್ ಕುಂಬಳೆ ಘಟಕದ ಮನವಿಗೆ ಸ್ಪಂದಿಸಿ ಗ್ರಾ.ಪಂ. ಸದಸ್ಯರ, ಇತರ ಪ್ರತಿನಿಧಿಗಳ ಸಂಪೂರ್ಣ ಸಹಕಾರದೊಂದಿಗೆ ಈ ಕಾಲದಲ್ಲಾದರೂ ರಸ್ತೆಗೆ ಪಾರ್ತಿಸುಬ್ಬನ ಹೆಸರಿರಿಸುವ ಅವಕಾಶ ಲಭ್ಯವಾದುದು ಪುಣ್ಯದ ಕಾರ್ಯ ಎಂದು ನಾಮ ಫಲಕ ಅನಾವರಣಗೊಳಿಸಿ ಕುಂಬಳೆ ಗ್ರಾ.ಪಂ.ಅಧ್ಯಕ್ಷ ಪುಂಡರೀಕಾಕ್ಷ ಕೆ.ಎಲ್ ತಿಳಿಸಿದರು. ಮುಂದಿನ ದಿನಗಳಲ್ಲಿ ಶೇಡಿಕಾವು ಕೇಂದ್ರೀಕರಿಸಿ ಯಕ್ಷ ಪಿತಾಮಹನ ಪುತ್ಥಳಿಯನ್ನು ನಿರ್ಮಿಸುವ ಸಂಕಲ್ಪ ಇದೆ ಎಂದು ಅವರು ಈ ಸಂದರ್ಭ ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಯಕ್ಷಧ್ರುವ ಪಟ್ಲ ಪೌಂಡೇಶನ್ ನ ಸ್ಥಾಪಕ, ಖ್ಯಾತಯ ಭಾಗವತ ಪಟ್ಲ ಸತೀಶ ಶೆಟ್ಟಿ ಮಾತನಾಡಿ, ಇಂದು ಯಕ್ಷಗಾನ ಕ್ಷೇತ್ರ ವಿಶ್ವ ಮಾನ್ಯತೆಯೊಂದಿಗೆ ಸಕಲ ಕಡೆಗಳಲ್ಲೂ ಮನ್ನಣೆಗೊಳಗಾಗುತ್ತಿದೆ. ಯಕ್ಷಗಾನ ಸಾಧಕ ಕಲಾವಿದರಿಗೆ ಈ ಹಿಂದಿದ್ದ ಸಂಕಷ್ಟಗಳು ಇಂದು ಮರೆಯಾಗುತ್ತಿದೆ. ಆದರೆ ಈ ಹಂತದ ವರೆಗೆ ಕಲೆಯನ್ನು ದಾಟಿಸಲು ಕಾರಣರಾದ ಹಿರಿಯ ತಲೆಮಾರಿನ ಕಲಾಶ್ರೇಷ್ಠರ ಕೊಡುಗೆ, ತ್ಯಾಗಗಳನ್ನು ಮರೆಯುವಂತಿಲ್ಲ. ಪಾರ್ತಿಸುಬ್ಬನ ಹುಟ್ಟೂರಲ್ಲಿ ಕೊನೆಗೂ ಇಂತಹದೊಂದು ಸಂಕಲ್ಪ ಸಾಕಾರಗೊಂಡಿರುವುದು ಯಕ್ಷಗಾನದ ಇತಿಹಾಸದಲ್ಲಿ ದಾಖಲಾಗುವ ಘಟನೆಯಾಗಿದೆ. ತನ್ನ ನಿರಂತರ ಪ್ರಯತ್ನದ ಫಲಶ್ರುತಿಯಿಂದ ಎಮದರು. ಈ ದಿನ ರಸ್ತೆ ಅನಾವರಣಗೊಳಿಸಲು ಸಹಕರಿಸಿದ ಗ್ರಾ.ಪಂ. ಅಧ್ಯಕ್ಷರು ಮತ್ತು ಸದಸ್ಯರುಗಳಿಗೆ ಪಟ್ಲ ಸತೀಶ್ ಶೆಟ್ಟಿಯವರು ಅಭಿನಂದಿಸಿ ಕೃತಜ್ಞತೆ ಸಲ್ಲಿಸಿದರು.
ಫೌಂಡೇಶನ್ ನ ಕುಂಬ್ಳೆ ಘಟಕದ ಅಧ್ಯಕ್ಷ ಕೆಳಗಿನ ಉಜಾರ್ ಜಗನ್ನಾಥ ಶೆಟ್ಟಿ, ಫೌಂಡೇಶನಿನ ಜೊತೆ ಕಾರ್ಯದರ್ಶಿ ರಾಘವೇಂದ್ರ ಬದಿಯಡ್ಕ, ಕೋಶಾಧಿಕಾರಿ ಮಧೂರು ರಾಧಾಕೃಷ್ಣ ನಾವಡ, ಉಪಾಧ್ಯಕ್ಷರಾದ ಮಡ್ವ ಮಂಜುನಾಥ ಆಳ್ವ , ಕೆಳಗಿನ ಬೈಲು ಲೋಕನಾಥ್ ಶೆಟ್ಟಿ ಉಪಸ್ಥಿತರಿದ್ದರು. ಘಟಕದ ಇನ್ನೋರ್ವ ಉಪಾಧ್ಯಕ್ಷ ಮುರುಳಿಧರ್ ಯಾದವ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಮ ಫಲಕ ಇರಿಸುವಲ್ಲಿ ಸಹಕರಿಸಿದ ಪಂಚಾಯತಿ ಅಧ್ಯಕ್ಷ ಕೆ ಪುಂಡರಿಕಾಕ್ಷ ಕೆ.ಎಲ್.ಮತ್ತು ಇತರ ಸದಸ್ಯರನ್ನು ಪಟ್ಲ ಸತೀಶ ಶೆಟ್ಟಿ ಸನ್ಮಾನಿಸಿದರು. ಘಟಕದ ಸಂಚಾಲಕ ಉಜಾರ್ ಪೃಥ್ವಿರಾಜ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ದಿವಾಣ ಶಿವಶಂಕರ್ ಭಟ್ ವಂದಿಸಿದರು. ಪಾಂಡವಾಸ್ ಕಂಚಿಕಟ್ಟೆ ಸದಸ್ಯರು ಸಹಕರಿಸಿದರು.