ಮಾಸ್ಕೋ: ಕೊವಿಡ್ ವಿರುದ್ಧದ ಎರಡು ರಷ್ಯಾದ ಲಸಿಕೆಗಳು ಪರಿಣಾಮಕಾರಿ ಮತ್ತು ಸುರಕ್ಷಿತ ಮೂರನೆಯದು ಪ್ರಾಯೋಗಿಕ ಹಂತದಲ್ಲಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತಿಳಿಸಿದ್ದಾರೆ.
ಕೊರೊನಾವೈರಸ್ ಸಮಸ್ಯೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.
ವರ್ಚುವಲ್ ಶಾಂಘೈ ಸಹಕಾರ ಸಂಸ್ಥೆ ಸಭೆಯನ್ನುದ್ದೇಶಿಸಿ ಮಾತನಾಡಿರುವ ಪುಟಿನ್ ಅಗತ್ಯವಿರುವ ದೇಶಗಳಿಗೆ ಔಷಧ ಮತ್ತು ಅಗತ್ಯ ಸರಕುಗಳನ್ನು ನೀಡುವುದನ್ನು ರಷ್ಯಾ ಬೆಂಬಲಿಸುತ್ತದೆ.
ನಾವು ರಷ್ಯಾದಲ್ಲಿ ಎರಡು ನೋಂದಾಯಿತ ಲಸಿಕೆಗಳನ್ನು ಹೊಂದಿದ್ದೇವೆ ಮತ್ತು ಲಸಿಕೆಗಳು ಸುರಕ್ಷಿತವೆಂದು ಈಗಾಗಲೇ ಪ್ರಯೋಗಗಳು ದೃಢಪಡಿಸಿವೆ. ಯಾವುದೇ ಅಡ್ಡ ಪರಿಣಾಮಗಳಿಲ್ಲ ಮತ್ತು ಅವುಗಳು ಸಮರ್ಥವಾಗಿವೆ.ಮೂರನೇ ಲಸಿಕೆಯು ಪ್ರಯೋಗದ ಹಂತದಲ್ಲಿದೆ ಎಂದು ತಿಳಿಸಿದರು.
ಆಗಸ್ಟ್‌ನಲ್ಲಿ ರಷ್ಯಾ ಇಡೀ ವಿಶ್ವದಲ್ಲೇ ಮೊದಲ ಬಾರಿಗೆ ಕೊವಿಡ್ ಲಸಿಕೆಯನ್ನು ಮೊದಲು ನೋಂದಾಯಿಸಿತ್ತು. ಇದನ್ನು ಗಮಲೇಯ ಸಂಶೋಧನಾ ಸಂಸ್ಥೆ ಅಭಿವೃದ್ಧಿಪಡಿಸಿದೆ. ಲಸಿಕೆ ಈಗ ಮೂರು ಹಾಗೂ ಅಂತಿಮ ಹಂತದ ಪ್ರಯೋಗದಲ್ಲಿದೆ.
ತಾನು ತಯಾರಿಸಿದ ಸ್ಪುಟ್ನಿಕ್-V ಕೊರೊನಾ ಲಸಿಕೆಗೆ ಭಾರತದಲ್ಲಿ ಒಪ್ಪಿಗೆ ಸಿಕ್ಕಿದರೆ 10 ಕೋಟಿ ಡೋಸ್‌ಗಳನ್ನು 'ಡಾ ರೆಡ್ಡೀಸ್ ಲ್ಯಾಬೊರೇಟರೀಸ್'ಗೆ ಮಾರಾಟ ಮಾಡುವುದಾಗಿ ರಷ್ಯಾದ ಸಾವರಿನ್ ವೆಲ್ತ್ ಫಂಡ್ ಹೇಳಿದೆ.
ಈ ಲಸಿಕೆಯ ಪ್ರಯೋಗ ಭಾರತದಲ್ಲಿ ಇನ್ನಷ್ಟೇ ನಡೆಯಬೇಕಿದ್ದು, ಇಲ್ಲಿನ ಕಂಪನಿ ಜೊತೆಗೆ ಸೇರಿ ಇದರ ಪ್ರಯೋಗ ನಡೆಸಲು
ರಷ್ಯಾ ಉದ್ದೇಶಿಸಿದೆ. ಆದರೆ ಲಸಿಕೆಗೆ ಒಪ್ಪಿಗೆ ಸಿಕ್ಕ ನಂತರವಷ್ಟೇ ಪ್ರಯೋಗ ಮತ್ತು ಪೂರೈಕೆ ನಡೆಯಲಿದೆ.