ಬೀಜಿಂಗ್ನ: ಭಾರತದಿಂದ ಆಮದು ಮಾಡಿಕೊಂಡಿರುವ ಮೀನುಗಳಿಂದ ಕೊವಿಡ್ 19 ಹರಡುತ್ತಿರುವ ಬಗ್ಗೆ ವರದಿಗಳು ಬಂದಿದೆ. ಭಾರತದ ಕಂಪನಿಯ ಆಮದು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ ಎಂದು ಚೀನಾದ ಅಧಿಕಾರಿಗಳು ಹೇಳಿದ್ದಾರೆ.
ಭಾರತದ ಬಸು ಇಂಟರ್ ನ್ಯಾಷನಲ್ ಸಂಸ್ಥೆಯಿಂದ ಚೀನಾಕ್ಕೆ ಮೀನು ರಫ್ತು ಮಾಡಲಾಗುತ್ತಿದೆ. ಆದರೆ, ಇತ್ತೀಚೆಗೆ ಬಂದ ಕ್ಯಾಟಲ್ ಫಿಶ್ ಪ್ಯಾಕೇಜಿನ ಹೊರಗಡೆ ಮೂರು ಸ್ಯಾಂಪಲ್ ಗಳಲ್ಲಿ ಕೊರೊನಾವೈರಸ್ ಪತ್ತೆಯಾಗಿದೆ.
ಈಗಾಗಲೇ ಇಂಡೋನೇಷಿಯಾದ ಪಿಟಿ ಸಂಸ್ಥೆಯ ಆಮದು ಕೂಡಾ ರದ್ದು ಪಡಿಸಲಾಗಿದೆ. ಶೀಥಲೀಕರಣ ಮಾಡಿದ ಮೀನು ಪ್ಯಾಕೇಜಿನಲ್ಲಿ ವೈರಸ್ ಪತ್ತೆಯಾಗಿತ್ತು. ಏಳು ದಿನಗಳ ರದ್ದು ನಂತರ ಆಮದು ಮತ್ತೆ ಆರಂಭವಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಶಾಂಗ್ ಡಂಗ್ ಪ್ರಾಂತ್ಯದ ಲಿಯಾಂಗ್ ಶಾನ್ ಕೌಂಟಿಯಲ್ಲಿ ಬಂದ ಗೋಮಾಂಸದ ಆಮದು ಪ್ಯಾಕೇಜ್ ನಲ್ಲಿ ಮೊದಲಿಗೆ ಕೊವಿಡ್ 19 ಸೋಂಕು ಪತ್ತೆಯಾಗಿತ್ತು. ಇದಾದ ಬಳಿಕ ಆಮದು ಮಾಡಿಕೊಂಡಿರುವ ಸೀಫುಡ್ ಪ್ಯಾಕೇಜ್ ಪರೀಕ್ಷಿಸಲಾಯಿತು ಎಂದು ಅಧಿಕಾರಿ ಬಿ ಕೆಕ್ಸಿನ್ ಹೇಳಿದ್ದಾರೆ.
ಭಾರತ ಅಲ್ಲದೆ , ಈಕ್ವೆಡಾರ್, ರಷ್ಯಾ, ಇಂಡೋನೇಷಿಯಾ, ಬ್ರೆಜಿಲ್ ಹಾಗೂ ನಾರ್ವೆಯಿಂದ ಸೀಫುಡ್ ಅಮದು ಮಾಡಿಕೊಳ್ಳಲಾಗುತ್ತಿದೆ. ಚೀನಾದಲ್ಲಿ 8 ರಿಂದ 12 ಕೊವಿಡ್ 19 ಪ್ರಕರಣಗಳು ಕಂಡು ಬಂದಿವೆ.
ನವೆಂಬರ್ 13ರಂದು ಈ ಸಮಯಕ್ಕೆ ವಿಶ್ವದೆಲ್ಲೆಡೆ 53,255,365ಕೊವಿಡ್ 19 ಪ್ರಕರಣಗಳಿವೆ ಹಾಗೂ ಸಾವಿನ ಸಂಖ್ಯೆ 1,302,065ಕ್ಕೇರಿದೆ. ಒಟ್ಟಾರೆ, 37,316,525ಮಂದಿ ಗುಣಮುಖರಾಗಿದ್ದಾರೆ. ಒಟ್ಟು 14,636,775ಸಕ್ರಿಯ ಪಾಸಿಟಿವ್ ಪ್ರಕರಣಗಳಿವೆ, 95,855 ವಿಷಮ ಪರಿಸ್ಥಿತಿಯಲ್ಲಿರುವ ಸೋಂಕಿತರಿದ್ದಾರೆ. 38,618,590 ಪ್ರಕರಣಗಳು ಮುಕ್ತಾಯಗೊಂಡಿವೆ. ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ರಾಷ್ಟ್ರಗಳಲ್ಲಿ ಅತಿ ಹೆಚ್ಚು ಚೇತರಿಕೆಗೊಂಡವರು ಕೂಡಾ ಇದ್ದಾರೆ.