ಪೆರ್ಲ: ಚೆರ್ಕಳ-ಕಲ್ಲಡ್ಕ ರಾಜ್ಯ ಹೆದ್ದಾರಿ ಕಾಮಗಾರಿಯನ್ವಯ ಪೆರ್ಲ ಪೇಟೆಯಲ್ಲಿ ಅಳವಡಿಸುತ್ತಿರುವ ಕಾಂಕ್ರೀಟ್ ಮಿಶ್ರಣದಿಂದ ಭಾರಿ ಪ್ರಮಾಣದಲ್ಲಿ ಧೂಳು ಎದ್ದೇಳುತ್ತಿದ್ದು, ಪೇಟೆಯ ವ್ಯಾಪಾರಿಗಳು ಮತ್ತು ಸಾರ್ವಜನಿಕರ ಪಾಲಿಗೆ ಭಾರಿ ಸಮಸ್ಯೆಯಾಗಿ ಪರಿಣಮಿಸುತ್ತಿದೆ. ಸಾಮಾನ್ಯವಾಗಿ ಕಾಂಕ್ರೀಟ್ ಮಿಶ್ರಣ ಅಳವಡಿಸಿದ ಒಂದೆರಡು ದಿವಸಗಳಲ್ಲಿ ಡಾಂಬರೀಕರಣ ನಡೆಸಬೇಕಾಗಿದ್ದು, ಕೆಲವೊಂದು ತಾಂತ್ರಿಕ ಕಾರಣಗಳಿಂದ ಇಲ್ಲಿ ಡಾಂಬರೀಕರಣ ವಿಳಂಬವಾಗುತ್ತಿರುವುದು ಸಮಸ್ಯೆಗೆ ಕಾರಣವಾಗಿದೆ. ಒಂದೆಡೆ ಬಿಸಿಲಿನ ಪ್ರಖರತೆ, ಇನ್ನೊಂದೆಡೆ ಕಾಂಕ್ರೀಟ್ ಮಿಶ್ರಣದ ಧೂಳು ಆರೋಗ್ಯ ಸಮಸ್ಯೆಗೂ ಕಾರಣವಾಗುತ್ತಿದೆ. ಪೇಟೆಯ ವ್ಯಾಪಾರಿಗಳು, ವಾಹನಚಾಲಕರು, ನಾಗರಿಕರು ಧೂಳಿನಿಂದ ಕೊಡವಿಕೊಳ್ಳಲಾಗದ ಸ್ಥಿತಿಯಲ್ಲಿದ್ದಾರೆ. ರಸ್ತೆಗೆ ನೀರು ಸಿಂಪಡಿಸುತ್ತಿದ್ದರೂ, ತಾಸಿನೊಳಗೆ ಆವಿಯಾಗಿ ಮತ್ತೆ ಯಥಾಸ್ಥಿತಿ ತಲುಪುತ್ತಿದೆ. ಅಂತಾರಾಜ್ಯ ಸಂಪರ್ಕದ ರಸ್ತೆಯಾಗಿರುವುದರಿಂದ ಭಾರಿ ಸಂಖ್ಯೆಯ ವಾಹನಗಳು ಈ ಹಾದಿಯಾಗಿ ಸಂಚರಿಸುತ್ತಿರುವುದರಿಂದ ಸಂಪೂರ್ಣ ಪೇಟೆ ಧೂಳುಮಯವಾಗುತ್ತಿದೆ.
ಕಾಂಕ್ರೀಟ್ ಮಿಶ್ರಣ ಅಳವಡಿಸಿದ ನಂತರ ಕೆಲವೊಂದು ಕಾರಣಗಳಿಂದ ಡಾಂಬರೀಕರಣ ವಿಳಂಬವಾಗಿದ್ದು, ನ. 2ರಿಂದ ಕಾಮಗಾರಿ ಆರಂಭಿಸಲಾಗುವುದು. ಈ ಮೂಲಕ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಲಿದೆ ಎಂದು ಲೋಕೋಪಯೋಗಿ ಇಲಾಖೆ ಬದಿಯಡ್ಕ ವಿಭಾಗ ಸಹಾಯಕ ಇಂಜಿನಿಂiÀiರ್ ಮಹೇಶ್ ಅವರು ತಿಳಿಸಿದ್ದಾರೆ.