ನವದೆಹಲಿ: ದೇಶಾದ್ಯಂತ ಕೋವಿಡ್-19 ಪ್ರಕರಣಗಳ ಸಂಖ್ಯೆಯಲ್ಲಿ ಸ್ವಲ್ಪ ತಗ್ಗಿದ್ದರೂ, ಕೇಂದ್ರ ಸರ್ಕಾರ ಎಚ್ಚರಿಕೆ ವಹಿಸಿದ್ದು, ಈ ವರ್ಷದ ಚಳಿಗಾಲದ ಅಧಿವೇಶನವನ್ನು ನಡೆಸದಿರಲು ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.
ಚಳಿಗಾಲದ ಅಧಿವೇಶನ ಮತ್ತು ಬಜೆಟ್ ಅಧಿವೇಶನವನ್ನು ಒಟ್ಟಿಗೆ ಮಾಡಬೇಕೆ ಅಥವಾ ಮುಂದಿನ ವರ್ಷ ನೇರವಾಗಿ ಬಜೆಟ್ ಅಧಿವೇಶನವನ್ನು ನಡೆಸುವುದು ಸೂಕ್ತವೇ ಎಂಬುದರ ಬಗ್ಗೆ ಪ್ರಸ್ತುತ ಚರ್ಚೆ ನಡೆಯುತ್ತಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಚಳಿಗಾಲದ ಅಧಿವೇಶನಕ್ಕಾಗಿ ಲೋಕಸಭಾ ಮತ್ತು ರಾಜ್ಯಸಭೆಯ ಸಚಿವಾಲಯಗಳು ಈವರೆಗೂ ಸಿದ್ಧತೆಯನ್ನು ಆರಂಭಿಸಿಲ್ಲ.
ಅಧಿವೇಶನ ಇದ್ದರೆ ಪ್ರಶ್ನೋತ್ತರ ವೇಳೆಯಲ್ಲಿ ಪ್ರಶ್ನೆಗಳನ್ನು ಕೇಳಲು 15 ದಿನಗಳ ಮುಂಚೆ ಸದಸ್ಯರಿಗೆ ಮಾಹಿತಿ ನೀಡಬೇಕಾಗುತ್ತದೆ. ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳದಿಂದಾಗಿ ಈ ವರ್ಷ ಚಳಿಗಾಲದ ಅಧಿವೇಶನವನ್ನು ನಡೆಸಬಾರದು ಎಂಬ ವಾದವನ್ನು ನೀಡಲಾಗಿದೆ. ಸಂಸತ್ತಿನ ಸದಸ್ಯರು ಅಧಿಕಾರಿಗಳು, ಜನರು ಮತ್ತು ಇತರ ಸದಸ್ಯರೊಂದಿಗೆ ನಿಕಟ ಸಂಪರ್ಕಕ್ಕೆ ಬರುವುದರಿಂದ ಮತ್ತು ಸಂಸತ್ ಭವನದಲ್ಲಿ ಸುರಕ್ಷತಾ ಕ್ರಮಗಳನ್ನು ಅನುಸರಿಸುತ್ತಿದ್ದರೂ ಸೋಂಕಿಗೆ ಗುರಿಯಾಗುವುದರಿಂದ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ.
ನವೆಂಬರ್ ಮಧ್ಯ ಭಾಗದಿಂದ ಆರಂಭವಾಗುತ್ತಿದ್ದ ಚಳಿಗಾಲದ ಅಧಿವೇಶನ ಡಿಸೆಂಬರ್ ಮಧ್ಯದಲ್ಲಿ ಮುಗಿಯುತಿತ್ತು. ಆದರೆ, ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್-19 ಸೋಂಕು ಹರಡುವಿಕೆ ಪರಿಸ್ಥಿತಿ ಇರುವುದರಿಂದ ಸಮಯಕ್ಕೆ ಸರಿಯಾಗಿ ಅಧಿವೇಶನ ನಡೆಸಲು ಸರ್ಕಾರ ಹಿಂಜರಿಯುತ್ತಿದೆ. ಮುಂದಿನ ವರ್ಷದ ಜನವರಿ ಅಂತ್ಯದಲ್ಲಿ ಮುಂದಿನ ಸಂಸತ್ ಅಧಿವೇಶನ, ಬಜೆಟ್ ಅಧಿವೇಶನವನ್ನು ಸರ್ಕಾರ ನಡೆಸುವ ಸಾಧ್ಯತೆಯಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.