ಕಾಸರಗೋಡು: ರಾಜ್ಯದಲ್ಲಿ ಸಿಪಿಎಂ ತನ್ನ ಅಸ್ತಿತ್ವ ಕಳೆದುಕೊಳ್ಳುವ ಸ್ಥಿತಿ ತಲುಪಿದ್ದು, ಮುಂದಿನ ದಿನಗಳಲ್ಲಿ ಪಕ್ಷ ಅಧ:ಪತನದತ್ತ ಸಾಗುವುದು ಖಚಿತ ಎಂದು ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ತಿಳಿಸಿದ್ದಾರೆ. ಐಕ್ಯರಂಗ ಜಿಲ್ಲಾ ನಾಯಕತ್ವ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಅವರು ಕಾಸರಗೋಡು ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಪತ್ರಕರ್ತರ ಜೊತೆ ಮಾತನಾಡಿದರು.
ಸಿಪಿಎಂ ರಾಜ್ಯಸಮಿತಿ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಅವರ ಪುತ್ರನ ಅನಧಿಕೃತ ಸೊತ್ತು ಸಂಪಾದನೆ ಬಗ್ಗೆ ಸ್ವತ: ಕೊಡಿಯೇರಿ ಬಾಲಕೃಷ್ಣನ್ ಅವರಿಗೆ ಅಥವಾ ಮುಖ್ಯಮಂತ್ರಿಗೆ ಮಾಹಿತಿ ಇಲ್ಲ ಎಂಬುದು ಅಪ್ಪಟ ಸುಳ್ಳು. ಪುತ್ರನ ಅವ್ಯವಹಾರದ ಬಗ್ಗೆ ಮಾಹಿತಿಯಿದ್ದರೂ, ಇದನ್ನು ತಡೆಯುವಲ್ಲಿ ಕೊಡಿಯೇರಿ ವಿಫಲರಾಗಿದ್ದಾರೆ ಎಂದು ದೂರಿದ ಅವರು ರಾಜ್ಯ ಸರ್ಕಾರದ ವೈಫಲ್ಯ ಮರೆಮಾಚಲು ರಾಜ್ಯದಲ್ಲಿ ನಕಲಿ ಎನ್‍ಕೌಂಟರ್ ಮೂಲಕ ನಕ್ಸಲರ ಹತ್ಯೆಗೆ ಮುಂದಾಗಿರುವುದಾಗಿ ಆರೋಪಿಸಿದರು. ಡಿಸಿಸಿ ಅಧ್ಯಕ್ಷ ಹಾಕಿಂ ಕುನ್ನಿಲ್, ಕಾಂಗ್ರೆಸ್ ಮುಖಂಡ ಎಂ.ಎಂ ಹಸನ್, ಡಿಸಿಸಿ ಕಾರ್ಯದರ್ಶಿಗಳು ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.