ತಿರುವನಂತಪುರ: ಸಿಪಿಎಂ ರಾಜ್ಯ ಕಾರ್ಯದರ್ಶಿ ಹುದ್ದೆಯಿಂದ ಕೊಡಿಯೇರಿ ಬಾಲಕೃಷ್ಣನ್ ಅವರ ರಾಜೀನಾಮೆಗೆ ಸಂಬಂಧಿಸಿ ಬಿಜೆಪಿ ರಾಜ್ಯ ಅಧ್ಯಕ್ಷ ಕೆ.ಸುರೇಂದ್ರನ್ ಪ್ರತಿಕ್ರಿಯಿಸಿದ್ದಾರೆ. ಸಿಪಿಎಂ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಅವರ ಸ್ಥಾನದಿಂದ ಕೆಳಗಿಳಿಯುವ ನಿರ್ಧಾರವನ್ನು ಮುಖ್ಯಮಂತ್ರಿಯೂ ಅನುಸರಿಸಬೇಕು ಎಂದು ಕೆ ಸುರೇಂದ್ರನ್ ಹೇಳಿದರು.
ಚಿನ್ನ ಕಳ್ಳಸಾಗಣೆ ಮತ್ತು ಸಂಬಂಧಿತ ಹಗರಣಗಳ ತನಿಖೆ ತನಗೆ ವಿರುದ್ಧವಾಗಿದೆ ಎಂದು ಮನವರಿಕೆಯಾಗಿದ್ದರೂ ಮುಖ್ಯಮಂತ್ರಿ ಅಧಿಕಾರಕ್ಕೆ ಅಂಟಿಕೊಳ್ಳುವುದು ಅನೈತಿಕ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಮಗನಾದ ಬಿನೀಶ್ ಕೊಡಿಯೇರಿ ಡ್ರಗ್ ಮತ್ತು ಮನಿ ಲಾಂಡರಿಂಗ್ ಪ್ರಕರಣದಲ್ಲಿ ಸಿಲುಕಿದ ಕಾರಣ ಮರ್ಯಾದೆ ಉಳಿಸಲು ಕೊಡಿಯೇರಿ ಕೊನೆಗೂ ರಾಜೀನಾಮೆ ನೀಡಿದರು. ಆದರೆ ತಮ್ಮ ಪ್ರಧಾನ ಕಾರ್ಯದರ್ಶಿಯಾಗಿದ್ದ ಶಿವಶಂಕರ್ ನನ್ನು ರಾಷ್ಟ್ರ ವಿರೋಧಿ ಚಿನ್ನ ಕಳ್ಳಸಾಗಣೆಗಾಗಿ ಇಡಿ ಕರೆಸಿಕೊಂಡಿದ್ದರೂ ಸಹ ಮುಖ್ಯಮಂತ್ರಿ ರಾಜೀನಾಮೆ ನೀಡದಿರುವುದು ಹೇಯಕರ ಎಂದು ಆರೋಪಿಸಿದರು.
ಸಿಎಂ ಮತ್ತವರ ಸಚಿವಾಲಯ ತಂಡ ಅಕ್ರಮ ಚಿನ್ನ ಕಳ್ಳಸಾಗಣೆದಾರರೊಂದಿಗೆ ಸಂಪರ್ಕದಲ್ಲಿದೆ ಎಂಬ ಇಡಿ ವರದಿ ಗಂಭೀರವಾಗಿದೆ. ಹೆಚ್ಚಿನ ಪುರಾವೆಗಳು ಹೊರಬರುವ ಮೊದಲು ರಾಜೀನಾಮೆ ನೀಡುವಂತೆ ಸಿಪಿಎಂ ಕೇಂದ್ರ ನಾಯಕತ್ವವು ಪಿಣರಾಯಿಗೆ ಸಲಹೆ ನೀಡಬೇಕೆಂದು ಕೆ ಸುರೇಂದ್ರನ್ ಒತ್ತಾಯಿಸಿದರು.
ಮುಂಬರುವ ಸ್ಥಳೀಯಾಡಳಿತ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗದಿರಲೆಂದು ಕೊಡಿಯೇರಿ ಯಾವುದೇ ಹಿಂಜರಿಕೆಯಿಲ್ಲದೆ ರಾಜೀನಾಮೆ ನೀಡಿರುವರು. ಆದ್ದರಿಂದ, ಸಿಪಿಎಂ ಅಥವಾ ಎಲ್ಡಿಎಫ್ ಇನ್ನು ತಪ್ಪಿಸಿಕೊಳ್ಳುವಂತಿಲ್ಲ. ಸಿಪಿಎಂನ ಉನ್ನತ ನಾಯಕರ ಆಸ್ತಿಗಳ ಬಗ್ಗೆ ತನಿಖೆ ನಡೆಸಬೇಕು ಎಂದು ಬಿಜೆಪಿ ಈಗಾಗಲೇ ಸೂಚಿಸಿದೆ. ಪಿಣರಾಯಿ ಸರ್ಕಾರದ ವಿರುದ್ಧ ಜನರ ಪ್ರತಿಭಟನೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪ್ರತಿಫಲಿಸುತ್ತದೆ ಎಂದು ಸುರೇಂದ್ರನ್ ಹೇಳಿದರು.