HEALTH TIPS

ತಲಸ್ಸೇಮಿಯಾ ಚಿಕಿತ್ಸೆಗಾಗಿ ಎಲ್ಲಿಗೆ ಹೋಗಬೇಕು?- ಮಗು ಸಹಿತ ಎರಡು ವಾರಗಳಲ್ಲಿ ಮೂರು ಸಾವುಗಳು!

 

      ಕಾಸರಗೋಡು: ಮಾರಣಾಂತಿಕ ರಕ್ತ ರೋಗಿಗಳ ಚಿಕಿತ್ಸಾ ಸೌಲಭ್ಯಕ್ಕೆ ಕಾಸರಗೋಡಿನಲ್ಲಿ ಸಾಕಷ್ಟು ವೈದ್ಯಕೀಯ ಸೌಲಭ್ಯಗಳಿಲ್ಲ. ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಸಾವಿನ ಸಂಖ್ಯೆ ಬಹಳ ಕಳವಳಕಾರಿಯಾಗಿದೆ. ಕಳೆದ ಎರಡು ವಾರಗಳಲ್ಲಿ ಮಗು ಸೇರಿದಂತೆ ಮೂರು ಮಂದಿಗಳು ರಕ್ತದ ಹೀಮೋಗ್ಲೋಬಿನ್ ಕುಂಠಿತತೆಯ ಕಾರಣದಿಂದ ಉಂಟಾಗುವ ಅಪಾಯಕಾರಿ ತಲಸ್ಸೆಮಿಯಾ ರೋಗದಿಂದ ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ ರಕ್ತದಿಂದ ಹರಡುವ ರೋಗ ಚಿಕಿತ್ಸೆಗೆ ತಜ್ಞ ಚಿಕಿತ್ಸಾ ಕೇಂದ್ರವನ್ನು ಸ್ಥಾಪಿಸಲು ಆರೋಗ್ಯ ಇಲಾಖೆ ಆದೇಶಿಸಿ ಮೂರು ತಿಂಗಳಾದರೂ ಅಗತ್ಯದ ಯಾವ ವ್ಯವಸ್ಥೆಯನ್ನೂ ಈವರೆಗೆ ಜಾರಿಗೊಳಿಸಲಾಗಿಲ್ಲ. ತಲಸ್ಸೆಮಿಯಾ, ಹಿಮೋಫಿಲಿಯಾ ಮತ್ತು ಹೀಮೋಗ್ಲೋಬಿನ್ ಕೋಶಗಳ ಕೊರತೆಯಿಂದ ಬಾಧಿಸುವುದಾಗಿದ್ದು ಮಂಗಳೂರಲ್ಲಿ ಚಿಕಿತ್ಸೆ ಲಭ್ಯವಿದೆ. ಆದರೆ ಕೋವಿಡ್ ನಿಯಂತ್ರಣ ಕಾರಣ ಸಂಪರ್ಕ ಸಾಧ್ಯತೆಯ ಕೊರತೆಯಿಂದ ಚಿಕಿತ್ಸೆ ಲಭ್ಯವಾಗದೆ ಜಿಲ್ಲೆಯಲ್ಲಿ ಅನೇಕ ರೋಗಿಗಳು ಮರಣಹೊಂದುತ್ತಿದ್ದಾರೆ. 

             ಜಿಲ್ಲಾ ಆಸ್ಪತ್ರೆ ಕೋವಿಡ್ ಆಸ್ಪತ್ರೆಯಾಗಿ ಮಾರ್ಪಾಡು-ಅನ್ಯ ರೋಗಿಗಳಿಗೆ ಮುಚ್ಚಿದ ಬಾಗಿಲು!:

  ಕಾಞಂಗಾಡ್ ಜಿಲ್ಲಾ ಆಸ್ಪತ್ರೆಯನ್ನು ತಲಸ್ಸೆಮಿಯಾ ರೋಗಿಗಳು ಮತ್ತು ಇತರ ಮಾರಕ ಹೆಮಟೊಪಯಟಿಕ್ ರೋಗಿಗಳಿಗೆ ತಜ್ಞ ಚಿಕಿತ್ಸಾ ಕೇಂದ್ರಕ್ಕೆ ಆಯ್ಕೆ ಮಾಡಲಾಗಿದೆ. ಇದಕ್ಕಾಗಿ ಆಸ್ಪತ್ರೆಯ ಸಹಾಯಕ ಶಸ್ತ್ರಚಿಕಿತ್ಸಕನನ್ನು ಅದರ ನೋಡಲ್ ಅಧಿಕಾರಿಯಾಗಿ ನೇಮಿಸಲಾಯಿತು. ಆದರೆ ಈಗ ಜಿಲ್ಲಾ ಆಸ್ಪತ್ರೆಯನ್ನು ಸಂಪೂರ್ಣವಾಗಿ ಕೋವಿಡ್ ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗಿದ್ದು, ರಕ್ತ ವರ್ಗಾವಣೆ ಮಾಡುವ ರೋಗಿಗಳು ಸೇರಿದಂತೆ ತುರ್ತು ಚಿಕಿತ್ಸೆ ಅಲಭ್ಯವಾಗಿದೆ. 

     ಜಿಲ್ಲೆಯಲ್ಲಿ ಸುಮಾರು 50 ಮಾರಣಾಂತಿಕ ರಕ್ತ ರೋಗಿಗಳಿದ್ದಾರೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಅವರು ಪ್ರಸ್ತುತ ಚಿಕಿತ್ಸೆಗಾಗಿ ಮಂಗಳೂರು ಮತ್ತು ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿನ ಆಸ್ಪತ್ರೆಗಳನ್ನು ಅವಲಂಬಿಸಿದ್ದಾರೆ. ಆಗಾಗ್ಗೆ ತುರ್ತು ರಕ್ತ ಮತ್ತು ತಜ್ಞರ ಚಿಕಿತ್ಸೆಯ ಅಗತ್ಯವಿರುವುದರಿಂದ ಪರಿಸ್ಥಿತಿ ಇದ್ದಕ್ಕಿದ್ದಂತೆ ಹದಗೆಡುತ್ತಿದೆ.


              ಎರಡು ವಾರಗಳಲ್ಲಿ ಮೂವರ ದುರ್ಮರಣ: 

    ಮೊಗ್ರಾಲ್ ಮೂಲದ ಅಬ್ದುಲ್ ಹಫೀಜ್ (24), ಮಂಜೇಶ್ವರದ ಸೈಫುದ್ದೀನ್ (18) ಮತ್ತು ಚೆಂಗಳ ಚೆರೂರಿನ ಮೊಯ್ದು ಎಂಬವರು ಕಳೆದ ಎರಡು ವಾರಗಳಲ್ಲಿ ತಲಸ್ಸೆಮಿಯಾದಿಂದ ಸಾವನ್ನಪ್ಪಿದವರು. ತಲಸ್ಸೆಮಿಯಾ ರೋಗಿಗಳಿಗೆ ತಿಂಗಳಿಗೆ ಎರಡು ಅಥವಾ ಮೂರು ಬಾರಿ ರಕ್ತ ವರ್ಗಾವಣೆಯ ಅಗತ್ಯವಿರುತ್ತದೆ. ರೋಗಿಗಳಿಗೆ ಜೀವ ಉಳಿಸುವ ಔಷಧಿಗಳನ್ನು ಮತ್ತು ರಕ್ತ ಫಿಲ್ಟರ್ ಸೆಟ್‍ಗಳನ್ನು ಉಚಿತವಾಗಿ ನೀಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ ಈ ಬಗ್ಗೆ ಅಧಿಕಾರಿಗಳು ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ರೋಗಿಗಳು ದೂರಿದ್ದಾರೆ. ಜಿಲ್ಲೆಯಲ್ಲಿ ವಿಶೇಷ ವೈದ್ಯಕೀಯ ಸೌಲಭ್ಯಗಳನ್ನು ಸ್ಥಾಪಿಸಲು ಮತ್ತು ಹೆಚ್ಚುತ್ತಿರುವ ಸಾವುಗಳನ್ನು ತಡೆಯಲು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ರಕ್ತ ರೋಗಿಗಳ ಸಂರಕ್ಷಣಾ ಮಂಡಳಿಯ ರಾಜ್ಯ ಕನ್ವೀನರ್ ಕರೀಮ್ ಕರಸ್ಸೇರಿ ಸರ್ಕಾರವನ್ನು ಕೋರಿದ್ದಾರೆ.

                ರಕ್ತಕ್ಕೂ ಓಡಬೇಕು: 

     ಪ್ರಸ್ತುತ ಜಿಲ್ಲೆಯ ಬ್ಲಡ್ ಬ್ಯಾಂಕಿಗೆ ತೆರಳಿದರೆ ರಕ್ತ ದಾನ ಮಾಡಬಹುದಷ್ಟೆ!. ಕಾರಣ ನಮಗೆ ರಕ್ತ ಬೇಕಿದ್ದರೆ ಅಗತ್ಯದಷ್ಟು ಅಲ್ಲಿ ಲಭ್ಯವಿರುವುದಿಲ್ಲ. ರಕ್ತಕ್ಕಾಗಿ   ಮತ್ತೊಂದು ಆಸ್ಪತ್ರೆಯನ್ನು ಸಂಪರ್ಕಿಸುವ ಸಾಧ್ಯತೆಗಳೇ ಇಲ್ಲಿ ಹೆಚ್ಚು. ಜಿಲ್ಲೆಯ ಯಾವುದೇ ಆಸ್ಪತ್ರೆಯಲ್ಲಿ ಅಂತಹ ಸೌಲಭ್ಯವಿಲ್ಲದ ಕಾರಣ, ಕೋಝಿಕ್ಕೋಡ್ ಅಥವಾ ಮಂಗಳೂರಿಗೆ ಹೋಗಬೇಕಾಗುತ್ತದೆ. ತಿಂಗಳಿಗೆ ನಾಲ್ಕು ಅಥವಾ ಐದು ಬಾರಿ ಮಂಗಳೂರಿಗೆ ಹೋಗಲು ಕಷ್ಟವಾಗುವುದರಿಂದ ರೋಗಿಗಳು ಇನ್ನಷ್ಟು ಶೋಚನೀಯರಾಗುತ್ತಾರೆ. ಈ ಹಿಂದೆ ಭರವಸೆ ನೀಡಿದಂತೆ ವೈದ್ಯಕೀಯ ಸೌಲಭ್ಯಗಳು, ಉಚಿತ ಔಷಧಿಗಳು, ಫಿಲ್ಟರ್ ಸೆಟ್ ಮತ್ತು ರಕ್ತವನ್ನು ಖಚಿತಪಡಿಸಿಕೊಳ್ಳಲು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ರಕ್ತ ರೋಗಿಗಳ ಸಂರಕ್ಷಣಾ ಮಂಡಳಿಯ ಟ್ರಸ್ಟಿಗಳಾದ ಎಂ.ವಿ.ಅಬ್ದುಲ್ ಅಜೀಜ್ ಮತ್ತು ಮೊಯ್ದೀನ್ ಪೂವಡ್ಕ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries