ವಾಷಿಂಗ್ಟನ್: ಅಧ್ಯಕ್ಷೀಯ ಚುನಾವಣೆಯಲ್ಲಿ ಸೋತಿರುವ ಡೊನಾಲ್ಡ್ ಟ್ರಂಪ್ ಈಗ ಪತ್ನಿಯಿಂದ ಬೇರೆಯಾಗಲಿದ್ದಾರೆ ಎಂಬ ವದಂತಿಗಳು ಕೇಳಿಬರತೊಡಗಿವೆ.
ಡೊನಾಲ್ಡ್ ಟ್ರಂಪ್ ಹಾಗೂ ಮೆಲಾನಿಯಾ ಟ್ರಂಪ್ ತಮ್ಮ 15 ವರ್ಷಗಳ ಟ್ರಾನ್ಸಾಕ್ಷನಲ್ ವಿವಾಹವನ್ನು ಅಂತ್ಯಗೊಳಿಸಲು ನಿರ್ಧರಿಸಲಿದ್ದಾರೆ ಎಂದು ತಿಳಿದುಬಂದಿದೆ. ಡೊನಾಲ್ಡ್ ಟ್ರಂಪ್ ಶ್ವೇತ ಭವನದಿಂದ ನಿರ್ಗಮಿಸುತ್ತಿದ್ದಂತೆಯೇ ಟ್ರಂಪ್ ಪತ್ನಿ ವಿಚ್ಛೇದನ ನೀಡುವುದಕ್ಕೆ ಸಿದ್ಧತೆ ನಡೆಸಿದ್ದಾರೆ ಎಂದು ಶ್ವೇತ ಭವನದ ಮೂಲಗಳು ಮಾಹಿತಿ ನೀಡಿವೆ.
ಟ್ರಂಪ್ ಹಾಗು ಮೆಲಾನಿಯಾ ಟ್ರಂಪ್ ಇಬ್ಬರ 15 ವರ್ಷಗಳ ಟ್ರಾನ್ಸಾಕ್ಷನಲ್ ಮದುವೆ ಅಂತ್ಯಗೊಳ್ಳಲಿದೆ, ಶ್ವೇತ ಭವನದಲ್ಲಿರುವಷ್ಟು ದಿನ ಮಾತ್ರವೇ ಟ್ರಂಪ್-ಮೆಲಾನಿಯಾ ಜೊತೆಯಲ್ಲಿರಲಿದ್ದು, ಟ್ರಂಪ್ ಅಧಿಕಾರಾವಧಿ ಮುಕ್ತಾಯಗೊಳ್ಳುತ್ತಿದ್ದಂತೆಯೇ ಪತ್ನಿ ವಿಚ್ಛೇದನ ನೀಡಲಿದ್ದಾರೆ ಎಂದು ಒಮರೋಸಾ ಮನಿಗಾಲ್ಟ್ ನ್ಯೂಮನ್ ಡೈಲಿ ಮೇಲ್ ಗೆ ಮಾಹಿತಿ ನೀಡಿದ್ದಾರೆ.
ಟ್ರಂಪ್ ಅಧಿಕಾರದಲ್ಲಿರುವಾಗ ವಿಚ್ಛೇದನ ನೀಡಿದರೆ ತಮ್ಮನ್ನು ಶಿಕ್ಷಿಸುವ ಮಾರ್ಗಗಳು ಇರುತ್ತವೆ ಆದ ಕಾರಣ ಅಧಿಕಾರಾವಧಿ ಮುಕ್ತಾಯಗೊಂಡ ನಂತರ ವಿಚ್ಛೇದನ ನೀಡಲು ಮೆಲಾನಿಯಾ ಟ್ರಂಪ್ ಚಿಂತನೆ ನಡೆಸಿದ್ದಾರೆ.
2016 ರಲ್ಲಿ ಟ್ರಂಪ್ ಚುನಾವಣೆಯಲ್ಲಿ ಗೆದ್ದಾಗ ಮೆಲಾನಿಯಾ ಟ್ರಂಪ್ ಕಣ್ಣೀರಾಗಿದ್ದರು, ಗೆಲುವನ್ನು ಆಕೆ ನಿರೀಕ್ಷಿಸಿರಲಿಲ್ಲ. ಟ್ರಂಪ್-ಮೆಲಾನಿಯಾ ಟ್ರಂಪ್ ಮಗನ ಶಾಲೆ ಇದ್ದ ಕಾರಣದಿಂದಾಗಿ ಅವರು ನ್ಯೂಯಾರ್ಕ್ ನಿಂದ ವಾಷಿಂಗ್ ಟನ್ ಗೆ ಸ್ಥಳಾಂತರಗೊಳ್ಳುವುದಕ್ಕೆ 5 ತಿಂಗಳು ಕಾದಿದ್ದರು ಎಂದೂ ಶ್ವೇತ ಭವನದ ನಿಕಟವರ್ತಿ ಒಮರೋಸಾ ಮನಿಗಾಲ್ಟ್ ನ್ಯೂಮನ್ ತಿಳಿಸಿದ್ದಾರೆ.
ವಿವಾಹದ ನಂತರ ಡೊನಾಲ್ಡ್ ಟ್ರಂಪ್ ಜೊತೆ ಮೆಲಾನಿಯಾ ಒಪ್ಪಂದ ಮಾಡಿಕೊಂಡಿದ್ದು, ಮಗನಿಗೆ ಆತನ ಪಾಲನ್ನು ನೀಡಬೇಕೆಂಬ ಬೇಡಿಕೆ ಮುಂದಿಟ್ಟಿದ್ದರು. ಅಷ್ಟೇ ಅಲ್ಲದೇ ಶ್ವೇತ ಭವನದಲ್ಲಿಯೂ ಟ್ರಂಪ್ ಹಾಗೂ ಮೆಲಾನಿಯಾ ಟ್ರಂಪ್ ಪ್ರತ್ಯೇಕ ಕೋಠಡಿಗಳಲ್ಲೇ ಇರುತ್ತಿದ್ದರು ಎಂದು ಶ್ವೇತ ಭವನದ ಮೂಲಗಳು ತಿಳಿಸಿವೆ.