ನವದೆಹಲಿ: ಕುಟುಂಬ ನಡೆಸುವ ಪಕ್ಷಗಳಿಂದ ಭಾರತದ ಪ್ರಜಾಪ್ರಭುತ್ವಕ್ಕೆ ದೊಡ್ಡ ಬೆದರಿಕೆ ಮತ್ತು ರಾಷ್ಟ್ರೀಯ ಪಕ್ಷ ಕೂಡ ಅದರಿಂದ ಹೊರತಾಗಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ಬಿಹಾರ ಚುನಾವಣೆ ಮತ್ತು ವಿವಿಧ ಉಪಚುನಾವಣೆಗಳಲ್ಲಿ ಬಿಜೆಪಿ ವಿಜಯದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ದೆಹಲಿಯಲ್ಲಿನ ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಿನ್ನೆ ನಡೆದ ಸಮಾರಂಭದಲ್ಲಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಮೋದಿ ಅವರು, ತಮ್ಮ ಪಕ್ಷದ ವಿಜಯದ ಏಕೈಕ ಮಂತ್ರವೆಂದರೆ ಸಬ್ಕಾ ಸಾಥ್, ಸಬ್ಕಾ ವಿಕಾಸ್ ಮತ್ತು ಸಬ್ಕಾ ವಿಶ್ವಾಸ್ ಎಂದು ಹೇಳಿದರು.
ಬಿಹಾರ ಮತ್ತು ದೇಶಾದ್ಯಂತದ ಇತರ ಉಪಚುನಾವಣೆಗಳಲ್ಲಿನ ಸಮೀಕ್ಷೆಯ ಫಲಿತಾಂಶಗಳು ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುವವರಿಗೆ ಮಾತ್ರ ಮತದಾರರು ಬೆಂಬಲಿಸುತ್ತಾರೆ ಎಂದು ಮೋದಿ ಹೇಳಿದರು.
"21ನೇ ಶತಮಾನದಲ್ಲಿ ಅಭಿವೃದ್ಧಿ ಮಾತ್ರ ರಾಷ್ಟ್ರೀಯ ರಾಜಕಾರಣದ ಆಧಾರವಾಗಲಿದೆ ಎಂದು ಜನರು ನಿರ್ಧರಿಸಿದ್ದಾರೆ. ಬಿಜೆಪಿ ವಿರುದ್ಧ ಪ್ರಜಾಸತ್ತಾತ್ಮಕವಾಗಿ ಹೋರಾಡಲು ಸಾಧ್ಯವಾಗದವರು ಪಕ್ಷದ ಕಾರ್ಯಕರ್ತರನ್ನು ಕೊಲೆ ಮಾಡಲು ಮುಂದಾಗಿದ್ದಾರೆ ಎಂದು ಮೋದಿ ಆರೋಪಿಸಿದರು. ಬಿಜೆಪಿಯಲ್ಲಿ ನಂಬಿಕೆ ಇಟ್ಟಿದ್ದಕ್ಕಾಗಿ ದೇಶದ ಜನರನ್ನು ಶ್ಲಾಘಿಸಿದ ಪ್ರಧಾನಿ, ಚುನಾವಣಾ ಆಯೋಗ, ಭದ್ರತಾ ಪಡೆ ಮತ್ತು ಆಡಳಿತವನ್ನು ಶಾಂತಿಯುತವಾಗಿ ಮತ್ತು ಯಶಸ್ವಿಯಾಗಿ ನಡೆಸಿದ್ದಕ್ಕಾಗಿ ಶ್ಲಾಘಿಸಿದರು.ದೇಶಾದ್ಯಂತ ಚುನಾವಣೆ ಮತ್ತು ಉಪಚುನಾವಣೆಗಳಲ್ಲಿ ಬಿಜೆಪಿಯ ಯಶಸ್ಸನ್ನು ಉಲ್ಲೇಖಿಸಿ, ಈ ಫಲಿತಾಂಶಗಳು ಲೋಕಸಭಾ ಚುನಾವಣೆಯ ಫಲಿತಾಂಶವನ್ನು ವಿಸ್ತರಿಸಿದೆ ಎಂದರು. "ಬಡವರು, ದಲಿತರು, ವಂಚಿತರು ತಮ್ಮ ಪ್ರಾತಿನಿಧ್ಯವನ್ನು ನೋಡುವ ಏಕೈಕ ರಾಷ್ಟ್ರೀಯ ಪಕ್ಷ ಬಿಜೆಪಿ. ಪ್ರತಿ ವಿಭಾಗ, ಪ್ರದೇಶದ ಅಗತ್ಯವನ್ನು ಬಿಜೆಪಿ ಮಾತ್ರ ಅರ್ಥಮಾಡಿಕೊಳ್ಳುತ್ತದೆ. ಮತದಾನದ ಫಲಿತಾಂಶಗಳು ನಾವು ಕೋವಿಡ್ 19 ಸಾಂಕ್ರಾಮಿಕ ರೋಗವನ್ನು ನಿಭಾಯಿಸಿದ ರೀತಿಯನ್ನು ಅನುಮೋದಿಸಿವೆ ಎಂದು ಅವರು ಹೇಳಿದರು.
ಎಲ್ಲಾ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಬಿಜೆಪಿಯನ್ನು ಬೆಂಬಲಿಸುವ 'ಸೈಲೆಂಟ್ ಮತದಾರರು' ದೇಶಾದ್ಯಂತ ಮಹಿಳೆಯರು ಎಂದು ಮೋದಿ ಹೇಳಿದರು.