ಹೊನಿಯಾರ (ಸೋಲೊಮನ್ ಐಲ್ಯಾಂಡ್), ನ. 18: ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ತನ್ನ ವಿರುದ್ಧ ಕೇಳಿಬರುತ್ತಿರುವ ಟೀಕೆಗಳನ್ನು ಸಹಿಸಲಾಗದೆ ಸೋಲೊಮನ್ ಐಲ್ಯಾಂಡ್ಸ್ ದ್ವೀಪ ರಾಷ್ಟ್ರವು ಫೇಸ್‌ಬುಕ್ಕನ್ನೇ ನಿಷೇಧಿಸಲು ಮುಂದಾಗಿದೆ.
ಪೆಸಿಫಿಕ್ ಸಮುದ್ರದಲ್ಲಿರುವ ದ್ವೀಪ ಸರಕಾರದ ಈ ನಿರ್ಧಾರಕ್ಕೆ ಮಾನವಹಕ್ಕು ಗುಂಪುಗಳು ಮತ್ತು ಪ್ರತಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ.
ಈ ವಾರ ಫೇಸ್‌ಬುಕ್ಕನ್ನು ತಾತ್ಕಾಲಿಕವಾಗಿ ನಿಷೇಧಿಸುವ ಕರಡು ಆದೇಶವನ್ನು ಸಂಪರ್ಕ ಸಚಿವ ಪೀಟರ್ ಶ್ಯಾನಲ್ ಆಯಗೊವಾಕ ಸಿದ್ಧಪಡಿಸಿದ್ದಾರೆ ಹಾಗೂ ಆದೇಶವನ್ನು ಹೇಗೆ ಜಾರಿಗೊಳಿಸಬೇಕು ಎಂಬ ಬಗ್ಗೆ ಇಂಟರ್‌ನೆಟ್ ಪೂರೈಕೆದಾರ ಕಂಪೆನಿಗಳೊಂದಿಗೆ ಮಾತುಕತೆಗಳು ಚಾಲ್ತಿಯಲ್ಲಿವೆ ಎಂದು 'ಸೋಲೊಮನ್ ಟೈಮ್ಸ್' ಪತ್ರಿಕೆ ವರದಿ ಮಾಡಿದೆ.
''ದೇಶದ ಪ್ರಧಾನಿ, ಸಚಿವರ ವಿರುದ್ಧ ಕೆಟ್ಟ ಭಾಷೆಯಿಂದ ಬೈಯಲಾಗುತ್ತಿದೆ ಹಾಗೂ ಅವರ ಚಾರಿತ್ಯವಧೆ ಮಾಡಲಾಗುತ್ತಿದೆ. ಇದು ಕಳವಳಕಾರಿ ಸಂಗತಿಯಾಗಿದೆ'' ಎಂದು ಸಚಿವರು ಪತ್ರಿಕೆಯೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.