ಫುಟ್ಬಾಲ್ ದಂತಕತೆ ಡಿಯಾಗೋ ಮರಡೋನಾ ಇನ್ನಿಲ್ಲ. 1986 ವಿಶ್ವಕಪ್ ವಿಜೇತ ಮರಡೋನಾ ಅವರು ಅರ್ಜೆಂಟೀನಾದ ಖಾಸಗಿ ಆಸ್ಪತ್ರೆಯಲ್ಲಿ ಇಂದು (ನ.25) ಹೃದಯಸ್ತಂಭನಕ್ಕೊಳಗಾಗಿ ಮೃತಪಟ್ಟಿದ್ದಾರೆ.
ಇತ್ತೀಚೆಗೆ ಮರಡೋನಾ ತಲೆಯಲ್ಲಿ ರಕ್ತ ಹೆಪ್ಪುಗಟ್ಟಿದ್ದರಿಂದ ಮರಡೋನಾ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿತ್ತು. ಇನ್ನೇನು ಆಸ್ಪತ್ರೆಯಿಂದ ಮನೆಗೆ ತೆರಳುತ್ತಾರೆ ಎಂದು ಅಭಿಮಾನಿಗಳು ನಂಬಿಕೆ ಇರಿಸಿಕೊಂಡಿದ್ದರು. ಆದರೆ, ಮರಡೋನಾ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.
ರಕ್ತಹೀನತೆ, ನಿರ್ಜಲೀಕರಣ ಮತ್ತು ಖಿನ್ನತೆಯ ಕಾರಣದಿಂದಾಗಿ ಮರಡೋನಾ ಅವರು ಲಾ ಪ್ಲಾಟಾದಲ್ಲಿರುವ ಐಪೆನ್ಸಾ ಕ್ಲಿನಿಗೆ ದಾಖಲಾಗಿದ್ದರು.ಭಾರತಕ್ಕೆ ಬಂದಿದ್ದ ಮರಡೋನಾ:2018ರಲ್ಲಿ ಶ್ರೀಭೂಮಿ ಸ್ಫೋರ್ಟಿಂಗ್ ಕ್ಲಬ್ ಹಮ್ಮಿಕೊಂಡಿದ್ದ ದಾನ ದತ್ತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ 2008ರಲ್ಲಿ ಕೋಲ್ಕತಾಗೆ ಭೇಟಿ ನೀಡಿದ್ದನ್ನು ಸ್ಮರಿಸಿ, 'ನಾನೇನು ದೇವರಲ್ಲ, ಒಬ್ಬ ಸಾಮಾನ್ಯ ಫುಟ್ಬಾಲ್ ಆಟಗಾರ' ಎಂದಿದ್ದರು.
1986ರ ವಿಶ್ವಕಪ್ ಎತ್ತಿ ಹಿಡಿದಿರುವ ತಮ್ಮ ಪ್ರತಿಮೆಯನ್ನು ಕೋಲ್ಕತಾದ ಪಾರ್ಕೊಂದರಲ್ಲಿ ಅನಾವರಣಗೊಳಿಸಿ, ನನ್ನ ಪ್ರತಿಮೆ ನೋಡಿ ಖುಷಿಯಾಗುತ್ತಿದೆ ಎಂದು ಉದ್ಗರಿಸಿದ್ದರು.
ಕ್ರಿಕೆಟ್ ದಿಗ್ಗಜ ಸೌರವ್ ಗಂಗೂಲಿ ತಂಡ ಹಾಗೂ ಡಿಯಾಗೋ ಮರಡೋನಾ ತಂಡದ ನಡುವೆ ಬರಸಾತ್ ಸ್ಟೇಡಿಯಂನಲ್ಲಿ ಪ್ರದರ್ಶನ ಪಂದ್ಯ ಕೂಡಾ ನಡೆಸಲಾಗಿತ್ತು.
1986 ರ ವಿಶ್ವಕಪ್ ಕ್ವಾರ್ಟರ್ ಫೈನಲ್ಸ್ ನಲ್ಲಿ ಇಂಗ್ಲೆಂಡ್ ಅನ್ನು 1-2 ರಿಂದ ಅರ್ಜೆಂಟೀನಾ ಮಣಿಸಲು ಮರಡೋನಾ ನೆರವಾಗಿದ್ದರು. ಅಲ್ಲದೆ, ಹ್ಯಾಂಡ್ ಆಫ್ ಗಾಡ್' (ಕೈಯಿಂದ ಗೋಲ್ ಹೊಡೆದ ) ಕುಖ್ಯಾತಿಗೂ ಮರಡೋನಾ ಪಾತ್ರರಾಗಿದ್ದರು.