ತಿರುವನಂತಪುರ: ಕೇರಳದಲ್ಲಿ ಕೇಂದ್ರ ತನಿಖಾ ದಳಕ್ಕೆ (ಸಿಬಿಐ) ತನಿಖೆ ನಡೆಸದಿರಲು ಸೂಚನೆ ನೀಡಲಾಗಿದ್ದು, ಅಧಿಸೂಚನೆ ಹೊರಡಿಸಲಾಗಿದೆ. ಸರ್ಕಾರದ ಪೂರ್ವಾನುಮತಿ ಇಲ್ಲದೆ ಕೇರಳದಲ್ಲಿ ತನಿಖೆ ನಡೆಸಲು ಸಿಬಿಐಗೆ ನೀಡಿದ್ದ ಅನುಮತಿಯನ್ನು ಹಿಂತೆಗೆದುಕೊಂಡ ಬಳಿಕ ಅಧಿಸೂಚನೆ ಹೊರಡಿಸಲಾಗಿದೆ.
ಸಿಬಿಐ ಇನ್ನು ಕೇರಳದಲ್ಲಿ ಸರ್ಕಾರದ ಅನುಮತಿಯೊಂದಿಗೆ, ನ್ಯಾಯಾಲಯದ ಆದೇಶದಂತೆ ಮಾತ್ರ ತನಿಖೆ ನಡೆಸಬಹುದು.
ಸಂಪುಟ ನಿರ್ಣಯದ ಪ್ರಕಾರ ಗೃಹ ಕಾರ್ಯದರ್ಶಿ ಸಜ್ನಯ್ ಕೌನ್ ಈ ಅಧಿಸೂಚನೆಯನ್ನು ಹೊರಡಿಸಿದ್ದಾರೆ. ಲೈಫ್ ಮಿಷನ್ ಹಗರಣ ಪ್ರಕರಣವನ್ನು ಸಿಬಿಐ ನೇರವಾಗಿ ವಹಿಸಿಕೊಂಡ ಬಳಿಕ ರಾಜ್ಯ ಸರ್ಕಾರವು ತನಿಖಾ ಸಂಸ್ಥೆಗೆ ನೀಡಿರುವ ಅನುಮತಿಯನ್ನು ಹಿಂಪಡೆಯುವ ನಿರ್ಧಾರಕ್ಕೆ ಬಂದಿತ್ತು.
ಆದರೂ ಈ ಅಧಿಸೂಚನೆ ಪ್ರಸ್ತುತ ಅಸ್ತಿತ್ವದಲ್ಲಿರುವ ಸಿಬಿಐ ತನಿಖೆಗಳಿಗೆ ಅನ್ವಯಿಸುವುದಿಲ್ಲ. ಕಳೆದ ತಿಂಗಳು, ಮಹಾರಾಷ್ಟ್ರ ಸರ್ಕಾರವು ಪ್ರಕರಣಗಳನ್ನು ನೇರವಾಗಿ ತೆಗೆದುಕೊಳ್ಳಲು ಕೇಂದ್ರ ತನಿಖಾ ದಳಕ್ಕೆ (ಸಿಬಿಐ) ನೀಡಿದ ಅನುಮತಿಯನ್ನು ಹಿಂತೆಗೆದುಕೊಂಡಿತು. ಅಲ್ಲದೆ ಬಂಗಾಳ, ಆಂಧ್ರಪ್ರದೇಶ ಮತ್ತು ಛತ್ತೀಸ್‍ಗಡ್ ಸೇರಿದಂತೆ ವಿರೋಧ ಪಕ್ಷಗಳು ಆಳುವ ರಾಜ್ಯಗಳು ಮತ್ತು ಇತ್ತೀಚೆಗೆ ರಾಜಸ್ಥಾನವೂ ಇದೇ ರೀತಿಯಲ್ಲಿ ಸಿಬಿಐ ತನಿಖೆಗೆ ಮೂಗುದಾರ ಬಿಗಿದಿದೆ.