ಕಾಸರಗೋಡು: ಜಿಲ್ಲೆಯ ಸಾಂಸ್ಕøತಿಕ ಲೋಕದ ಹೆಮ್ಮೆಯ ಸಂಸ್ಥೆ ರಂಗಚಿನ್ನಾರಿಯ 14ನೇ ವಾರ್ಷಿಕೋತ್ಸವ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ನ. 7ರಂದು ಮಧ್ಯಾಹ್ನ 3.30ಕ್ಕೆ ಕಾಸರಗೋಡು ಕರಂದಕ್ಕಾಡಿನ ಪದ್ಮಗಿರಿ ಕಲಾಕುಟೀರದಲ್ಲಿ ಜರುಗಲಿದೆ.
ಈ ಸಂದರ್ಭ ಕಳೆದ 37ವರ್ಷಗಳಿಂದ ನಾಟ್ಯ ನಿಲಯಂ ಸಂಸ್ಥೆ ಮೂಲಕ ನೂರಾರು ಮಂದಿಗೆ ಭರತನಾಟ್ಯ ತರಬೇತಿ ನೀಡುತ್ತಿರುವ ಬಾಲಕೃಷ್ಣ ಮಂಜೇಶ್ವರ ಮತ್ತು ಹೆಸರಾಂತ ಸಾಹಿತಿ ವಿಜಯಲಕ್ಷ್ಮೀ ಶ್ಯಾನುಭಾಗ್ ಅವರಿಗೆ ರಂಗಚಿನ್ನಾರಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ರಂಗ ಚಿನ್ನಾರಿ ಯುವ ಪ್ರಶಸ್ತಿಗೆ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಮೂಲಕ ಗಮನಸೆಳೆಯುತ್ತಿರುವ ಜಿ.ಅನೂಪ್ ಸ್ವರ್ಗ, ಸಂಗೀತ ಕ್ಷೇತ್ರದಲ್ಲಿ ಹೆಸರುಗಳಿಸುತ್ತಿರುವ ಅಪೇಕ್ಷಾ ಪೈ, ಯೋಗ ಮತ್ತು ನೃತ್ಯದಲ್ಲಿ ರಾಷ್ಟ್ರಮಟ್ಟದಲ್ಲಿ ಹೆಸರುಗಳಿಸುತ್ತಿರುವ ಕುಮಾರಿ ಅಭಿಜ್ಞಾ ಹರೀಶ್ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಪುರಸ್ಕøತರಿಗೆ ಸನ್ಮಾನಪತ್ರ, ಫಲಕ, ಫಲ, ಶಾಲು, ಹಾರದ ಜತೆಗೆ ತಲಾ 5ಸಾವಿರ ರೂ. ನಗದು ನೀಡಿ ಗೌರವಿಸಲಾಗುವುದು ಎಂದು ರಂಗಚಿನ್ನಾರಿ ನಿರ್ದೇಶಕ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.