ವಾಷಿಂಗ್ಟನ್: ಭಾರಿ ಕುತೂಹಲ ಕೆರಳಿಸಿದ್ದ ಅಮೆರಿಕದ ಚುನಾವಣೆಯಲ್ಲಿ ಜೋ ಬೈಡೆನ್ ಅವರು ಚುನಾಯಿತರಾಗುವ ಮೂಲಕ ಅಧ್ಯಕ್ಷರಾಗಿ ಘೋಷಿತರಾಗಿದ್ದಾರೆ. ಆದರೆ ಹಾಲಿ ಅಧ್ಯಕ್ಷರಾಗಿರುವ ಡೊನಾಲ್ಡ್ ಟ್ರಂಪ್ ಇದುವರೆಗೂ ತಮ್ಮ ಹಠ ಬಿಟ್ಟಿಲ್ಲ, ಸೋಲನ್ನೂ ಒಪ್ಪಿಕೊಳ್ಳಲು ಅವರು ತಯಾರಿಲ್ಲ.
ಈ ನಡುವೆಯೇ ಅಚ್ಚರಿಯ ಬೆಳವಣಿಗೆಯಲ್ಲಿ ಚೀನಾ, ತಾನು ಸದ್ಯ ಚುನಾಯಿತ ಅಧ್ಯಕ್ಷ ಜೋ ಬೈಡೆನ್ ಅವರನ್ನು ಅಭಿನಂದಿಸಲಾರೆ ಎಂದಿದೆ. ಡೆಮಾಕ್ರಟಿಕ್ ಪಕ್ಷ ಸದಾ ಚೀನಾದ ಪರವಾಗಿದೆ ಎಂದು ಹೇಳಲಾಗುತ್ತಿದ್ದರೂ ಅದೇ ಪಕ್ಷದ ಅಭ್ಯರ್ಥಿ ಅಧ್ಯಕ್ಷನಾಗಿ ಚುನಾಯಿತರಾದರೂ ಚೀನಾ ಇದನ್ನು ಇನ್ನೂ ಸುಲಭದಲ್ಲಿ ಒಪ್ಪಿಕೊಂಡಿಲ್ಲ.
ಸದ್ಯ ಅವರು ಚುನಾಯಿತರಾಗಿದ್ದಾರಷ್ಟೇ. ಆದರೆ ಇದು ಅಂತಿಮ ಫಲಿತಾಂಶವಲ್ಲ, ಇನ್ನೂ ಬದಲಾಗಬಹುದು. ಅಮೆರಿಕದ ಕಾನೂನು ಮತ್ತು ಕಾರ್ಯವಿಧಾನದಲ್ಲಿ ಕೆಲವೊಂದು ನಿಯಮಗಳು ಇವೆ. ಅವುಗಳ ಆಧಾರದ ಮೇಲೆ ಅಧ್ಯಕ್ಷಸ್ಥಾನವನ್ನು ನಿರ್ಧರಿಸಲಾಗುತ್ತದೆ. ಆದ್ದರಿಂದ ಸದ್ಯವೇ ನಾವು ಬೈಡೆನ್ ಅವರನ್ನು ಅಭಿನಂದಿಸಲಾರೆವು ಎಂದಿದ್ದಾರೆ ಚೀನಾ ಅಧ್ಯಕ್ಷ ಕ್ಸಿ ಜಿಂಗ್ಪಿಂಗ್.
ಇದೆ ಕಾರಣಕ್ಕೆ, ಹಲವಾರು ವಿಶ್ವ ನಾಯಕರು ಬೈಡೆನ್ ಅವರಿಗೆ ಅಭಿನಂದನೆಗಳ ಮಹಾಪೂರ ಹರಿಸಿದರೂ ಚೀನಾ ಮೌನವಾಗಿದೆ. ಇದೇ ನಿಲುವನ್ನು ರಷ್ಯಾ ಮತ್ತು ಮೆಕ್ಸಿಕೊಗಳೂ ಹೊಂದಿದ್ದು, ಅಲ್ಲಿಂದ ಯಾರೂ ಇದುವರೆಗೆ ಅಭಿನಂದನೆ ಸಲ್ಲಿಸಿಲ್ಲ.
ಸದ್ಯ ಡೊನಾಲ್ಡ್ ಟ್ರಂಪ್ ಅವರ ಅಧಿಕಾರಾವಧಿ ಜನವರಿ 2021ರವರೆಗೆ ಇದ್ದು, ಅಲ್ಲಿಯವರೆಗೆ ಅವರೇ ಅಧ್ಯಕ್ಷರು. ಜೋ ಬೈಡೆನ್ ಅವರು ನಿಯೋಜಿತ ಅಧ್ಯಕ್ಷರಷ್ಟೇ. ಇನ್ನೆರಡು ತಿಂಗಳು ಏನು ಬೇಕಾದರೂ ಆಗಬಹುದು ಎನ್ನುವ ಲೆಕ್ಕಾಚಾರ ಈ ದೇಶಗಳದ್ದು.