ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ಮೋದಿ ಸರ್ಕಾರದ ವಿರುದ್ಧ ಹರಿಹಾಯುತ್ತಿದ್ದ ಕಾಂಗ್ರೆಸ್ ಇದೀಗ ವಿಶೇಷ ಸ್ಥಾನಮಾನ ಪುನರ್ ಸ್ಥಾಪನೆಯ ಸಲುವಾಗಿ ರಚಿಸಲಾಗಿರುವ ಗುಪ್ಕಾರ್ ಮೈತ್ರಿಕೂಟದಲ್ಲಿ ನಾವಿಲ್ಲ ಎಂದು ಹೇಳಿ ಯೂಟರ್ನ್ ಹೊಡೆದಿದೆ.
ಜಮ್ಮು ಮತ್ತು ಕಾಶ್ಮೀರದ ಪ್ರಾದೇಶಿಕ ಪಕ್ಷಗಳೆಲ್ಲಾ ಸೇರಿ ವಿಶೇಷ ಸ್ಥಾನಮಾನ ಪುನಃಸ್ಥಾಪನೆಗಾಗಿ ಗುಪ್ಕಾರ್ ಮೈತ್ರಿಕೂಟವನ್ನು ರಚಿಸಿಕೊಂಡಿದ್ದು ಇದರ ಭಾಗವಾಗಿ ಕಾಂಗ್ರೆಸ್ ಇಲ್ಲ. ಅಲ್ಲದೆ ಈ ಮೈತ್ರಿಕೂಟದ ಯಾವುದೇ ವ್ಯಕ್ತಿಗಳ ಜೊತೆಗೂ ಕಾಂಗ್ರೆಸ್ ಪಕ್ಷ ಸಂಪರ್ಕದಲ್ಲಿ ಇಲ್ಲ ಎಂದು ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲಾ ಘೋಷಿಸಿದ್ದಾರೆ.
ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಈ ಮೈತ್ರಿಕೂಟದ ಮುಖ್ಯಸ್ಥರಾಗಿದ್ದು 2019ರ ಆಗಸ್ಟ್ 4ರಂದು ಈ ಮೈತ್ರಿಕೂಟವನ್ನು ಸ್ಥಾಪಿಸಲಾಗಿತ್ತು. ಶ್ರೀನಗರ ಗುಪ್ಕಾರ್ ಭವನದಲ್ಲಿ ನಡೆದ ಸಭೆ ಬಳಿಕ ಘೋಷಣೆ ಪ್ರಕಟವಾದ ಕಾರಣ ಇದು ಗುಪ್ಕಾರ್ ಘೋಷಣೆ ಎಂದೇ ಖ್ಯಾತವಾಗಿದೆ.
ಕಾಂಗ್ರೆಸ್ ಮತ್ತು 'ಗುಪ್ಕಾರ್ ಗ್ಯಾಂಗ್' ಜಮ್ಮು ಮತ್ತು ಕಾಶ್ಮೀರವನ್ನು ಭಯೋತ್ಪಾದನೆ ಮತ್ತು ಪ್ರಕ್ಷುಬ್ಧತೆಯ ಯುಗಕ್ಕೆ ಹಿಂತಿರುಗುವಂತೆ ಮಾಡಲು ಉದ್ದೇಶಿಸಿದೆ. ಅಲ್ಲದೆ ನಾವು ತೆಗೆದು ಹಾಕಿದ್ದ "370ನೇ ವಿಧಿಯನ್ನು ಮರುಸ್ಥಾಪಿಸುವ ಮೂಲಕ ದಲಿತರು, ಮಹಿಳೆಯರು ಮತ್ತು ಬುಡಕಟ್ಟು ಜನಾಂಗದವರ ಹಕ್ಕುಗಳನ್ನು ಕಸಿದುಕೊಳ್ಳಲು ಬಯಸುತ್ತಾರೆ ಎಂದು ಕೇಂದ್ರ ಸಚಿವ ಅಮಿತ್ ಶಾ ಟೀಕಿಸಿದ್ದರು. ಇದಾದ ಕೆಲ ಹೊತ್ತಿನಲ್ಲೇ ಕಾಂಗ್ರೆಸ್ ಈ ಹೇಳಿಕೆ ನೀಡಿದೆ.