ತಿರುವನಂತಪುರ: ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಕೋವಿಡ್ ಸೋಂಕಿತರ ಸಂಖ್ಯೆ ನಿಧಾನವಾಗಿ ಕ್ಷೀಣಿಸುತ್ತಿರುವುದರಿಂದ ರಾಜ್ಯದಲ್ಲಿ ಶಾಲೆಗಳನ್ನು ಭಾಗಶಃ ಪುನಃ ತೆರೆಯಬಹುದಾಗಿದೆ ಎಂದು ವರದಿಯಾಗಿದೆ. ಮೊದಲ ಹಂತದಲ್ಲಿ 10 ಮತ್ತು 12 ನೇ ತರಗತಿ ವಿದ್ಯಾರ್ಥಿಗಳತರಗತಿಗಳನ್ನು ಮಾತ್ರ ಆರಂಭಿಸಲು ಸರ್ಕಾರ ಯೋಜಿಸುತ್ತಿರುವುದಾಗಿ ತಿಳಿದುಬಂದಿದೆ.
ನವೆಂಬರ್ 15 ರ ಬಳಿಕ ಶಾಲೆಗಳು ಮತ್ತೆ ತೆರೆಯಲು ಸಿದ್ಧವಾಗಿವೆ ಎಂದು ಶಿಕ್ಷಣ ಇಲಾಖೆ ಸರ್ಕಾರಕ್ಕೆ ತಿಳಿಸಿದೆ. ಆರೋಗ್ಯ ತಜ್ಞರೊಂದಿಗೆ ಚರ್ಚಿಸಿದ ನಂತರ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ವರದಿಯಾಗಿದೆ.
ಹತ್ತನೇ ತರಗತಿ ಮತ್ತು ಪ್ಲಸ್ ಟು ಪರೀಕ್ಷೆಗಳಿಗೆ ಪ್ರಸ್ತುತ ವರ್ಷ ಐದು ತಿಂಗಳಿಗಿಂತಲೂ ಕಡಿಮೆ ಸಮಯ ಮಾತ್ರವಿದ್ದು ಸರ್ಕಾರವು ಹೊಸ ನಡೆಯೊಂದಿಗೆ ಮುಂದುವರಿಯುತ್ತಿದೆ. 10 ಮತ್ತು 12 ನೇ ತರಗತಿಯ ಮಕ್ಕಳಿಗೆ ಶಾಲೆ ಆರಂಭಿಸಲು ಸಾಮಾಜಿಕ ದೂರವನ್ನು ಖಚಿತಪಡಿಸಿಕೊಳ್ಳಲು ಅವರನ್ನು ಬ್ಯಾಚ್‍ಗಳಾಗಿ ವಿಂಗಡಿಸುವ ಚಿಂತನೆ ಸರ್ಕಾರದ ಮುಂದಿದೆ. ಆದರೆ ಕೋವಿಡ್ ಹೆಚ್ಚು ಪ್ರಕರಣಗಳಿರುವ ಪ್ರದೇಶಗಳಲ್ಲಿ ತರಗತಿಗಳನ್ನು ಕೈ ಬಿಡಲಾಗುವುದು. ತರಗತಿಗಳು ಪ್ರಾರಂಭವಾಗುವ ಮೊದಲು ಎಲ್ಲಾ ಜಿಲ್ಲೆಗಳಲ್ಲಿ ಕೋವಿಡ್ ಸಾಂಕ್ರಾಮಿಕದ ಸಮಗ್ರ ಮಾಹಿತಿಯನ್ನು ಸಂಗ್ರಹಿಸಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಕೇಂದ್ರ ಸರ್ಕಾರದ ಅನ್ಲಾಕ್ ಕ್ರಮಗಳ ಭಾಗವಾಗಿ ಅಕ್ಟೋಬರ್ 15 ರ ನಂತರ ಶಾಲೆಗಳು ಮತ್ತು ಕಾಲೇಜುಗಳನ್ನು ತೆರೆಯಲು ಅವಕಾಶವಿದೆ. ಆದರೆ ಹೆಚ್ಚಿನ ರಾಜ್ಯಗಳು ಇದಕ್ಕೆ ಸಿದ್ಧವಾಗಿಲ್ಲ. ಇಲ್ಲಿಯವರೆಗೆ, ಉತ್ತರ ಪ್ರದೇಶ ಮತ್ತು ಪುದುಚೇರಿಯಲ್ಲಿ ಮಾತ್ರ ಶಾಲೆಗಳನ್ನು ತೆರೆಯಲಾಗಿದೆ. ನವೆಂಬರ್ 17 ರಿಂದ ಕರ್ನಾಟಕದಲ್ಲಿ ಕಾಲೇಜುಗಳನ್ನು ತೆರೆಯಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ.