ನವದೆಹಲಿ: ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ ಪುನಾರಂಭ ಕುರಿತಂತೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಈ ಮಾರ್ಗಸೂಚಿಗಳನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಪರಿಶೀಲಿಸಿದ್ದು, ಶಿಕ್ಷಣ ಸಚಿವಾಲಯ ಮತ್ತು ಗೃಹ ವ್ಯವಹಾರಗಳ ಸಚಿವಾಲಯ ಅನುಮೋದಿಸಿದೆ.
ಸ್ಥಳೀಯ ಸ್ಥಿತಿಗತಿಗಳನ್ನು ಮತ್ತು ಸರ್ಕಾರಗಳ ನಿರ್ದೇಶನಗಳನ್ನು ಅನುಸರಿಸಿ ಶಿಕ್ಷಣ ಸಂಸ್ಥೆಗಳು ಈ ಮಾರ್ಗಸೂಚಿಗಳನ್ನು ಅಳವಡಿಸಿಕೊಳ್ಳಬೇಕು. ಕೇಂದ್ರದಿಂದ ಆರ್ಥಿಕ ನೆರವು ಪಡೆಯುತ್ತಿರುವ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಸಂಸ್ಥೆಯ ಮುಖ್ಯಸ್ಥರಿಗೆ ಆತ ಅಥವಾ ಆಕೆಗೆ ಭೌತಿಕವಾಗಿ ತರಗತಿಗಳನ್ನು ನಡೆಸುವ ಸಾಧ್ಯತೆಯ ಬಗ್ಗೆ ಮನವರಿಕೆಯಾದರೆ ಅವರು ಅದರಂತೆ ನಿರ್ಧಾರ ಕೈಗೊಳ್ಳಬಹುದು.
ಇತರೆ ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳು ಅಂದರೆ ರಾಜ್ಯ ವಿಶ್ವವಿದ್ಯಾಲಯಗಳು, ಖಾಸಗಿ ವಿಶ್ವವಿದ್ಯಾಲಯಗಳು, ಕಾಲೇಜು ಮತ್ತಿತರವುಗಳಲ್ಲಿ ಭೌತಿಕ ತರಗತಿಗಳನ್ನು ಆರಂಭಿಸಲು ಆಯಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರದ ನಿರ್ಧಾರದಂತೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳು ತಮ್ಮ ಕ್ಯಾಂಪಸ್ ಗಳನ್ನು ಹಂತಹಂತವಾಗಿ ಪುನರಾರಂಭ ಮಾಡುವ ಯೋಜನೆಗಳನ್ನು ರೂಪಿಸುವುದು. ಅಂತಹ ಸಂದರ್ಭಗಳಲ್ಲಿ ಸಾಮಾಜಿಕ ಅಂತರ ಪಾಲನೆ, ಮಾಸ್ಕ್ ಧರಿಸುವುದು ಮತ್ತು ಇತರ ರಕ್ಷಣಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚಿಸಲಾಗಿದೆ.