ಜಿನೀವಾ: ಪ್ರತಿಯೊಬ್ಬರೂ ಕೋವಿಡ್ 19 ಸೋಂಕಿನ ವಿರುದ್ಧದ ಹೋರಾಟವನ್ನು ಮುಂದುವರಿಸುತ್ತಲೇ ಇರಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯೂಎಚ್‌ಒ) ಪ್ರಧಾನ ನಿರ್ದೇಶಕ ಟೆಡ್ರೊಸ್ ಅಧಾನೊಮ್ ಗೆಬ್ರೆಯಿಸಸ್ ಕರೆ ನೀಡಿದ್ದಾರೆ.
ವೈರಸ್ ನಿಯಂತ್ರಣದ ಪ್ರಯತ್ನದಲ್ಲಿ ನಾವು ಹೋರಾಡಿ ಹೈರಾಣಾಗಿರಬಹುದು, ಆದರೆ ನಮ್ಮ ಬಗ್ಗೆ ವೈರಸ್‌ಗೆ ಯಾವುದೇ ಸುಸ್ತಾಗಿಲ್ಲ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯ ವಾರ್ಷಿಕ ಸಭೆಯಲ್ಲಿ ಸೋಮವಾರ ಮಾತನಾಡಿದ ಟೆಡ್ರೊಸ್, ಅಮೆರಿಕದ ಮುಂದಿನ ಅಧ್ಯಕ್ಷರಾಗಿ ಜೋ ಬೈಡನ್ ಅವರನ್ನು ಆಯ್ಕೆ ಮಾಡಿರುವುದನ್ನು ಶ್ಲಾಘಿಸಿದರು. ಕೊರೊನಾ ವೈರಸ್ ಪಿಡುಗನ್ನು ಅಂತ್ಯಗೊಳಿಸುವ ಜಾಗತಿಕ ಸಹಕಾರವನ್ನು ಮತ್ತಷ್ಟು ಬಲಪಡಿಸಲು ಬೈಡನ್ ಆಯ್ಕೆ ನೆರವಾಗಬಹುದು ಎಂದು ಅವರು ಆಶಯ ವ್ಯಕ್ತಪಡಿಸಿದರು.
ಜನರು ವಿಜ್ಞಾನವನ್ನು ಅನುಸರಿಸುವುದು ಬಹಳ ಮುಖ್ಯವಾಗಿದೆ ಎಂದ ಅವರು, ವೈರಸ್ ವಿಚಾರವಾಗಿ ಕುರುಡುತನ ಪ್ರದರ್ಶಿಸದಂತೆ ಮನವಿ ಮಾಡಿದರು. 'ಕೋವಿಡ್ 19ರಿಂದ ನಾವು ಸುಸ್ತಾಗಿರಬಹುದು, ಆದರೆ ನಮ್ಮಿಂದಾಗಿ ವೈರಸ್ ಹೈರಾಣಾಗಿಲ್ಲ' ಎಂದರು.
ದುರ್ಬಲ ಆರೋಗ್ಯದಲ್ಲ ಕೋವಿಡ್ 19 ಅಪಾಯಕಾರಿಯಾಗುತ್ತದೆ ಎಂದು ಎಚ್ಚರಿಕೆ ನೀಡಿದರು. 'ಅದು ಆರೋಗ್ಯವನ್ನು ದುರ್ಬಲಗೊಳಿಸುತ್ತದೆ. ಅಷ್ಟೇ ಅಲ್ಲ, ಅಸಮಾನತೆ, ವಿಭಜನೆ, ನಿರಾಕರಣೆ, ಕೆಟ್ಟ ಆಲೋಚನೆ ಮತ್ತು ಕಡೆಗಣನೆಯಂತಹ ಇತರೆ ದೌರ್ಬಲ್ಯಗಳನ್ನೂ ಮೂಡಿಸುತ್ತದೆ. ನಾವು ಅದರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಆಗುವುದಿಲ್ಲ. ನಾವು ಕಣ್ಣುಮುಚ್ಚಿ ಅದು ಹೋಗುತ್ತದೆ ಎಂದು ಭಾವಿಸಲಾಗದು' ಎಂದು ಹೇಳಿದರು.