ನವದೆಹಲಿ: ಕೊರೋನಾ ಲಸಿಕೆ ಲಭ್ಯವಾಗುತ್ತಿದ್ದಂತೆಯೇ ಮೊದಲಿಗೆ 1 ಕೋಟಿ ಆರೋಗ್ಯ ಕಾರ್ಯಕರ್ತರಿಗೆ ನೀಡಲಾಗುತ್ತದೆ ಎಂದು ಸರ್ವಪಕ್ಷ ಸಭೆಯಲ್ಲಿ ಕೇಂದ್ರ ಸರ್ಕಾರ ಹೇಳಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು ಸರ್ವ ಪಕ್ಷ ಸಭೆಯನ್ನು ನಡೆಸಿದ್ದು, ಸಭೆಯಲ್ಲಿ ಎಲ್ಲಾ ರಾಜ್ಯಗಳ ಕೊರೋನಾ ಪರಿಸ್ಥಿತಿ ಕುರಿತಂತೆ ಹಾಗೂ ಕೊರೋನಾ ಲಸಿಕೆ ಕುರಿತು ಮಾತುಕತೆ ನಡೆಸಿದ್ದಾರೆ.
ಇದಲ್ಲದೆ, ಪೊಲೀಸರು, ಸೇನಾ ಪಡೆಗಳು, ಪೌರಕಾರ್ಮಿಕರು ಹಾಗೂ ಇನ್ನಿತರೆ ಕಾರ್ಯಕರ್ತರೂ ಸೇರಿ ಒಟ್ಟು 2 ಕೋಟಿ ಜನರಿಗೂ ಲಸಿಕೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆಂದು ತಿಳಿದುಬಂದಿದೆ.
ಐದು, ಅದಕ್ಕಿಂತ ಹೆಚ್ಚು ಸಂಸದರನ್ನು ಹೊಂದಿರುವ ಪ್ರಮುಖ ರಾಜಕೀಯ ಪಕ್ಷಗಳಿಂದ 13 ನಾಯಕರು ಮಾತನಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಭೆಯಲ್ಲಿ ಕಾಂಗ್ರೆಸ್ ಪರವಾಗಿ ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಗುಲಾಮ್ ನಬಿ ಆಜಾದ್ ಮಾತನಾಡಿದ್ದು, ಟಿಎಂಸಿ ಪರವಾಗಿ ಸುದೀಪ್ ಬಂಡೋಪಧ್ಯಾಯ, ಎನ್'ಸಿಪಿ ಪರವಾಗಿ ಶರದ್ ಪವಾರ್, ಟಿಆರ್'ಎಸ್ ಪರವಾಗಿ ನಾಮ ನಾಗೇಶ್ವರ್ ರಾವ್, ಶಿವಸೇನೆ ಪರವಾಗಿ ವಿನಾಯಕ್ ರಾವತ್ ಮಾತನಾಡಿದ್ದಾರೆಂದು ವರದಿಗಳು ತಿಳಿಸಿವೆ.
ಸರ್ವಪಕ್ಷ ಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ, ಆರೋಗ್ಯ ಸಚಿವ ಹರ್ಷವರ್ಧನ್ ಹಾಗೂ ಇನ್ನಿತರೆ ಅಧಿಕಾರಿಗಳು ಹಾಜರಿದ್ದರು ಎಂದು ತಿಳಿದುಬಂದಿದೆ.
ಕೊರೋನಾ ಸಾಂಕ್ರಾಮಿಕ ಪಿಡುಗಿನ ಆರಂಭದಿಂದ ಕೇಂದ್ರ ಸರ್ಕಾರ ನಡೆಸುತ್ತಿರುವ 2ನೇ ಸರ್ವಪಕ್ಷ ಸಭೆ ಇದಾಗಿದೆ. ಭಾರತದಲ್ಲಿ ಕೊರೋನಾ ಲಾಕ್ಡೌನ್ ಜಾರಿಗೊಳಿಸುವುದಕ್ಕೂ ಮೊದಲು ಕಳೆದ ಏಪ್ರಿಲ್ ನಲ್ಲಿ ಸರ್ವಪಕ್ಷಗಳ ಸಭೆ ನಡೆಸಲಾಗಿತ್ತು.