ನವದೆಹಲಿ: ಜನವರಿಯಿಂದ 10 ಹಾಗೂ 12ನೇ ವರ್ಗದ ತರಗತಿಗಳನ್ನು ಭಾಗಶಃ ಆರಂಭಿಸಲು ಅನುಮತಿ ನೀಡುವಂತೆ ಕೋರಿ ಐಎಸ್‌ಸಿಇ ಮುಖ್ಯ ಕಾರ್ಯಕಾರಿ ಅಧಿಕಾರಿ ಹಾಗೂ ಕಾರ್ಯದರ್ಶಿ ಗೆರ‍್ರಿ ಅರಾಥೂನ್ ಅವರು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.
10 ಹಾಗೂ 12ನೇ ವರ್ಗದ ವಿದ್ಯಾರ್ಥಿಗಳು ಬೋರ್ಡ್ ಪರೀಕ್ಷೆಗೆ ಹಾಜರಾಗಬೇಕು. ಹೀಗಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ತರಗತಿಗಳನ್ನು ಆರಂಭಿಸಲು ಅನುಮತಿ ನೀಡುವಂತೆ ಅವರು ಪತ್ರದಲ್ಲಿ ಮನವಿ ಮಾಡಿದ್ದಾರೆ.
ಕೆಲವು ರಾಜ್ಯಗಳಲ್ಲಿ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಚುನಾವಣೆ ನಡೆಯಲಿದ್ದು, ಮತದಾನ ನಡೆಯುವ ದಿನಾಂಕವನ್ನು ತಿಳಿಸುವಂತೆ ಕೋರಿ ಅರಾಥೂನ್ ಅವರು ಮುಖ್ಯ ಚುನಾವಣಾ ಆಯುಕ್ತರಿಗೂ ಪತ್ರ ಬರೆದಿದ್ದಾರೆ. ಇದರಿಂದ ಪರೀಕ್ಷೆಗಳ ದಿನಾಂಕ ಅಂತಿಮಗೊಳಿಸಲು ಸಾಧ್ಯವಾಗುವುದು ಎಂದು ಪತ್ರದಲ್ಲಿ ವಿವರಿಸಿದ್ದಾರೆ.
'ಕೋವಿಡ್-19 ಹಿನ್ನೆಲೆಯಲ್ಲಿ ಕಳೆದ ಮಾರ್ಚ್‌ನಿಂದ ಶಾಲೆಗಳು ಕಾರ್ಯ ನಿರ್ವಹಿಸಿಲ್ಲ. ಆದರೆ, ಆನ್‌ಲೈನ್ ಹಾಗೂ ಆಫ್‌ಲೈನ್ ಮೂಲಕ ಬೋಧನೆ ಮಾಡಲಾಗುತ್ತಿದೆ' ಎಂದು ಅವರು ತಿಳಿಸಿದ್ದಾರೆ.