ನವದೆಹಲಿ: ಭಾರತದಲ್ಲಿ ಕೋವಿಡ್ ಲಸಿಕೆ ಹಂಚಿಕೆಗೆ ತಯಾರಿ ನಡೆದಿದೆ. ಪ್ರತಿದಿನ 100 ಜನರು ವಿವಿಧ ಸ್ಥಳಗಳಲ್ಲಿ ಲಸಿಕೆಯನ್ನು ಪಡೆಯಲಿದ್ದಾರೆ ಎಂದು ಸರ್ಕಾರ ಹೇಳಿದೆ. ಹೊಸ ವರ್ಷದಲ್ಲಿ ಭಾರಕ್ಕೆ ಲಸಿಕೆ ಬರುವ ನಿರೀಕ್ಷೆ ಇದೆ.
ಕೇಂದ್ರ ಆರೋಗ್ಯ ಸಚಿವಾಲಯ ಕೋವಿಡ್ ಲಸಿಕೆ ಕುರಿತು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಪ್ರತಿದಿನ 100 ಜನರಿಗೆ ಪ್ರತಿ ಕೇಂದ್ರದಲ್ಲಿ ಲಸಿಕೆ ನೀಡಬೇಕು. ಅಗತ್ಯ ಸೌಲಭ್ಯ ಇದ್ದರೆ 200 ಜನರಿಗೆ ಲಸಿಕೆ ನೀಡಬೇಕು ಎಂದು ಹೇಳಿದೆ.
200 ಜನರಿಗಿಂತ ಹೆಚ್ಚಿನವರಿಗೆ ಲಸಿಕೆ ನೀಡುವುದಾದರೆ 5 ಮಂದಿಯ ಪ್ರತ್ಯೇಕ ತಂಡವನ್ನು ರಚನೆ ಮಾಡಬೇಕು. ಪ್ರತಿ ತಂಡದಲ್ಲಿ ನಾಲ್ವರು ಲಸಿಕೆ ನೀಡುವವರು ಮತ್ತು ಒಬ್ಬರು ವ್ಯಾಕ್ಸಿನ್ ಅಧಿಕಾರಿ ಇರಬೇಕು ಎಂದು ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಲಾಗಿದೆ.
ವಾಕ್ಸಿನ್ ನೀಡುವ ಕೇಂದ್ರದಲ್ಲಿ ಮೂರು ಕೊಠಡಿಗಳು ಇರಬೇಕು. ಕಾಯುವ ಕೊಠಡಿ, ವ್ಯಾಕ್ಸಿನ್ ನೀಡುವ ಕೊಠಡಿ, ಪರಿಶೀಲನಾ ಕೊಠಡಿಗಳು ಇರಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಆರೋಗ್ಯ ಸಚಿವಾಲಯದ ಪ್ರಕಾರ ಮೊದಲು 1 ಕೋಟಿ ಆರೋಗ್ಯ ಕಾರ್ಯಕರ್ತರು, ಬಳಿಕ 2 ಕೋಟಿ ಕೋವಿಡ್ ವಾರಿಯರ್ಸ್, ಬಳಿಕ 26 ಕೋಟಿ 50 ವರ್ಷ ಮೇಲ್ಪಟ್ಟವರಿಗೆ ಆದ್ಯತೆಯಾಗಿ ಲಸಿಕೆ ನೀಡಬೇಕು.
ಮೊದಲ ಹಂತದಲ್ಲಿ ದೇಶದಲ್ಲಿ 30 ಕೋಟಿ ಜನರಿಗೆ ಲಸಿಕೆ ನೀಡಲು ತೀರ್ಮಾನಿಸಲಾಗಿದೆ. ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ಮತದಾರರ ಪಟ್ಟಿಯ ಅನ್ವಯ 50 ವರ್ಷ ಮೇಲ್ಪಟ್ಟವರನ್ನು ಗುರುತಿಸಬೇಕು ಎಂದು ಸೂಚನೆ ನೀಡಲಾಗಿದೆ.
ಕೋವಿಡ್ ಲಸಿಕೆ ಪಡೆದ ಪ್ರತಿಯೊಬ್ಬರ ಮೇಲೆಯೂ ಕೋ-ವಿನ್ ಎಂಬ ಡಿಜಿಟಲ್ ತಂತ್ರಾಂಶದ ಮೂಲಕ ನಿಗಾ ಇಡಲಾಗುತ್ತದೆ. ಸಾಮಾನ್ಯ ಜನರಿಗೆ ಕೋವಿಡ್ ಲಸಿಕೆ ಲಭ್ಯವಾಗುವ ಹೊತ್ತಿಗೆ ರೋಗ ಹರಡುವಿಕೆ ಪ್ರಮಾಣವನ್ನು ಲೆಕ್ಕಾಹಾಕಿ ಲಸಿಕೆ ಕೊಡಬೇಕು.
ಸರ್ಕಾರ ಲಸಿಕೆ ಸಂಗ್ರಹ ಮಾಡಲು ಕೋಲ್ಡ್ ಸ್ಟೋರೇಜ್ ಗಳತ್ತ ಗಮನ ಹರಿಸುತ್ತಿದೆ. 2 ರಿಂದ 8 ಡಿಗ್ರಿ ತನಕ ಸ್ಟೋರೇಜ್‌ಗಳಲ್ಲಿ ತಾಪಮಾನ ಕಾಪಾಡಬೇಕಾಗುತ್ತದೆ. ಭಾರತಕ್ಕೆ ಲಸಿಕೆ ನೀಡಲು 4 ಕಂಪನಿಗಳು ಮುಂದೆ ಬಂದಿವೆ. ಯಾವಾಗ ಲಸಿಕೆ ಬರಲಿದೆ? ಎಂದು ಕಾಯಲಾಗುತ್ತಿದೆ.