ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ ಸಂಬಂಧ ಚುನಾವಣೆ ನೀತಿಸಂಹಿತೆ ಉಲ್ಲಂಘಿಸಿದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 1022 ಪ್ರಚಾರ ಸಾಮಾಗ್ರಿಗಳನ್ನು ತೆರವುಗೊಳಿಸಲಾಗಿದೆ.
ಭಿತ್ತಿಪತ್ರತಗಳು, ಫ್ಲೆಕ್ಸ್ ಫಲಕಗಳು, ಬ್ಯಾನರ್ ಗಳು, ಫಲಕಗಳು, ಧ್ವಜಗಳು, ಗೋಡೆಬರಹಗಳು ಇತ್ಯಾದಿ ಈ ಸಾಲಿಗೆ ಸೇರುತ್ತವೆ.
ಕಾಞಂಗಾಡ್ ಬ್ಲೋಕ್ ವ್ಯಾಪ್ತಿಯಲ್ಲಿ ಅತ್ಯಧಿಕ ಪ್ರಮಾಣದಲ್ಲಿ ನೀತಿ ಸಂಹಿತೆ ಉಲ್ಲಂಘನೆ ನಡೆದಿದೆ ಎಂದು ಆರೋಪಿಸಲಾಗಿದೆ. ಇಲ್ಲಿ 275 ಪ್ರಚಾರ ಸಾಮಾಗ್ರಿಗಳ ತೆರವು ನಡೆದಿವೆ.
ಮಂಜೇಶ್ವರ ಬ್ಲೋಕ್ ವ್ಯಾಪ್ತಿಯಲ್ಲಿ 167 ಪ್ರಚಾರ ಸಾಮಾಗ್ರಿಗಳನ್ನು, ಕಾಸರಗೋಡು ಬ್ಲೋಕ್ ವ್ಯಾಪ್ತಿಯಲ್ಲಿ 251, ಕಾರಡ್ಕ ಬ್ಲೋಕ್ ವ್ಯಾಪ್ತಿಯಲ್ಲಿ 1499, ನೀಲೇಶ್ವರ ಬ್ಲೋಕ್ ವ್ಯಾಪ್ತಿಯಲ್ಲಿ 108, ಪರಪ್ಪ ಬ್ಲೋಕ್ ವ್ಯಾಪ್ತಿಯಲ್ಲಿ ಈ ನಿಟ್ಟಿನಲ್ಲಿ ತೆರವುಗೊಳಿಸುವಿಕೆ ನಡೆದಿವೆ.
ಜಿಲ್ಲೆಯ ನಗರಸಭೆಗಳ ಸಹಿತ ಎಲ್ಲ ಬ್ಲೋಕ್ ಗಳಲ್ಲೂ ಚಟುವಟಿಕೆ ನಡೆಸುತ್ತಿರುವ ಆಂಟಿ ಡಿಫೇಸ್ ಮೆಂಟ್ ಸ್ಕ್ವಾಡ್ ನೀತಿ ಸಂಹಿತೆ ಉಲ್ಲಂಘಿಸಿರುವ ಆರೋಪ ಹೊಂದಿರುವ ಪ್ರಚಾರ ಸಾಮಾಗ್ರಿಗಳನ್ನು ತೆರವುಗೊಳಿಸುವ ಕರ್ತವ್ಯ ನಡೆಸುತ್ತದೆ. ಸರಕಾರಿ ಕಚೇರಿಗಳ ಗೋಡೆಗಳಲ್ಲಿ ಮತ್ತು ಆವರಣದಲ್ಲಿ ನೋಟೀಸುಗಳು, ಬ್ಯಾನರ್ ಗಳು, ಭಿತ್ತಿಪತ್ರಗಳು, ಗೋಡೆಬರಹಗಳನ್ನು ಸ್ಥಾಪಿಸುವುದು, ಸಾರ್ವಜನಿಕರಿಗೆ ತೊಡಕಾಗುವಂತೆ ಪ್ರಚಾರ ಸಾಮಾಗ್ರಿಗಳನ್ನು ನಿರ್ಮಿಸುವುದು, ಖಾಸಗಿ ವ್ಯಕ್ತಿಯೊಬ್ಬರ ಜಾಗದಲ್ಲಿ ಅನುಮತಿ ಪಡೆಯದೆಯೇ ಪ್ರಚಾರ ಸಾಮಾಗ್ರಿಗಳನ್ನು ಸ್ಥಾಪಿಸುವುದು ಇತ್ಯಾದಿ ನೀತಿಸಂಹಿತೆಗಳನ್ನು ಉಲ್ಲಂಘಿಸಿದ ಆರೋಪದಲ್ಲಿ ತೆರವು ಕಾರ್ಯ ನಡೆಸಲಾಗುತ್ತದೆ ಎಂದು ಜಿಲ್ಲಾ ನೋಡೆಲ್ ಅಧಿಕಾರಿ ರತ್ನಾಕರನ್ ಎ.ಬಿ. ತಿಳಿಸಿದರು.
ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಸಾರ್ವಜನಿಕ ಪ್ರದೇಶಗಲಲ್ಲಿ, ಖಾಸಗಿ ಪ್ರದೇಶಗಳಲ್ಲಿ ಅಕ್ರಮವಾಗಿ ಪ್ರಚಾರ ಸಾಮಾಗ್ರಿ ಸ್ಥಾಪಿಸಿರುವುದು, ಘೋಷಣೆ ಕೂಗುವುದು ಇತ್ಯಾದಿ ನಡೆಸಿರುವ ದೂರು ಲಭಿಸಿದರೆ ತಕ್ಷಣ ತೆರವುಗೊಳಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಭ್ಯರ್ಥಿಗೆ ನೋಟಿಸು ಕಳುಹಿಸುವ ಕ್ರಮ ಕೈಗೊಳ್ಳಲಾಗುವುದು. ನೋಟೀಸು ಲಭಿಸಿಯೂ ನಿಗದಿತ ಅವಧಿಯಲ್ಲಿ ತೆರವುಗೊಳಿಸದೇ ಇದ್ದಲ್ಲಿ ಸಾಮಾಗ್ರಿಗಳನ್ನು ತಕ್ಷಣ ತೆರವುಗೊಳಿಸಲು ಸಿಬ್ಬಂದಿಗೆ ಆದೇಶ ನೀಡಿ ಅವುಗಳ ವೆಚ್ಚವನ್ನು ಸಂಬಂಧಪಟ್ಟ ಅಭ್ಯರ್ಥಿಯಿಂದ ವಸೂಲಿ ಮಾಡಲಾಗುವುದು ಎಂದವರು ತಿಳಿಸಿದರು.