ತ್ರಿಶೂರ್: ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ 10 ಕೋಟಿ ರೂ.ಗಳನ್ನು ಮರಳಿ ಗುರುವಾಯೂರ್ ದೇವಸ್ವಂ ಬೋರ್ಡ್ ಗೆ ಹಿಂತಿರುಗಿಸಲು ಸರ್ಕಾರಕ್ಕೆ ಹೈಕೋರ್ಟ್ ಶುಕ್ರವಾರ ಮಹತ್ತರ ಆದೇಶ ನೀಡಿದೆ. ಹೈಕೋರ್ಟ್ ಪೂರ್ಣ ನ್ಯಾಯಪೀಠದ ಆದೇಶದ ಪ್ರಕಾರ, ಗುರುವಾಯೂರಪ್ಪನ್ ಮಾತ್ರವೇ ಗುರುವಾಯೂರ್ ದೇವಸ್ಥಾನಕ್ಕೆ ಸಂಬಂಧಿಸಿದ ಎಲ್ಲಾ ಆಸ್ತಿಗಳಿಗೆ ಉತ್ತರಾಧಿಕಾರಿಯಾಗಿದ್ದು ಅದರ ಸೊತ್ತಿನಲ್ಲಿ ಸರ್ಕಾರಕ್ಕೆ ಯಾವ ಹಕ್ಕೂ ಇಲ್ಲ ಎಂದು ಸೂಚಿಸಿದೆ.
ಬಿಜೆಪಿ ಮುಖಂಡ ಎನ್ ನಾಗೇಶ್ ಮತ್ತು ಇತರರು ಸಲ್ಲಿಸಿದ್ದ ಸರಣಿ ಅರ್ಜಿಗಳ ಮೇರೆಗೆ ಈ ಆದೇಶ ಹೊರಬಿದ್ದಿದೆ. ದೇವಸ್ವಂ ಮಂಡಳಿಯು ಪ್ರವಾಹ ಮತ್ತು ಕೋವಿಡ್ ಅವಧಿಯಲ್ಲಿ ಮುಖ್ಯಮಂತ್ರಿಯ ವಿಪತ್ತು ಪರಿಹಾರ ನಿಧಿಗೆ 10 ಕೋಟಿ ರೂ.ನೀಡಿತ್ತು.
ಇದರ ವಿರುದ್ಧ ಬಿಜೆಪಿ ಮುಖಂಡ ಎನ್.ನಾಗೇಶ್ ಮತ್ತು ಇತರರು ಹೈಕೋರ್ಟ್ ಸಂಪರ್ಕಿಸಿದ್ದರು. ಮುಖ್ಯಮಂತ್ರಿಯ ವಿಪತ್ತು ಪರಿಹಾರ ನಿಧಿಗೆ ದೇವಸ್ವಂ ಮಂಡಳಿಯ ಕೊಡುಗೆ ಕಾನೂನುಬಾಹಿರ ಎಂದು ಹೈಕೋರ್ಟ್ ಈ ಮೂಲಕ ವಿಶೇಷವೆಂಬಂತ ತೀರ್ಪು ನೀಡಿದೆ.
ಟ್ರಸ್ಟಿಯಾಗಿ, ದೇವಸ್ವಂ ಮಂಡಳಿಗೆ ಆಸ್ತಿಯನ್ನು ನಿರ್ವಹಿಸುವ ಏಕೈಕ ಹಕ್ಕಿದೆ. ಅದನ್ನು ಬೇರೆಯವರಿಗೆ ವರ್ಗಾಯಿಸುವ ಹಕ್ಕಿಲ್ಲ. ಗುರುವಾಯೂರ್ ದೇವಾಲಯಕ್ಕೆ ಸಂಬಂಧಿಸಿದ ಎಲ್ಲಾ ಆಸ್ತಿಗಳ ಉತ್ತರಾಧಿಕಾರಿ ಗುರುವಾಯೂರಪ್ಪನ್ ಎಂದು ಹೈಕೋರ್ಟ್‍ನ ಪೂರ್ಣ ನ್ಯಾಯಪೀಠದ ಆದೇಶವೂ ಗಮನಾರ್ಹವಾಗಿದೆ.
ಈ ಬಗ್ಗೆ ದೇವಸ್ವಂ ಕಾಯ್ದೆಯಲ್ಲಿ ಸ್ಪಷ್ಟ ಮಾರ್ಗದರ್ಶನ ಇದೆ. ಆಡಳಿತ ಮಂಡಳಿಯು ಆ ಕಾನೂನಿನ ಮಿತಿಯಲ್ಲಿ ಮಾತ್ರ ಕಾರ್ಯನಿರ್ವಹಿಸಬಹುದು ಎಂದು ಹೈಕೋರ್ಟ್ ಹೇಳಿದೆ. ವಿಪತ್ತು ಪರಿಹಾರ ನಿಧಿಗೆ ನೀಡುವಂತಹ ವಿಷಯಗಳು ದೇವಸ್ವಂ ಮಂಡಳಿಯ ವ್ಯಾಪ್ತಿಗೆ ಅಥವಾ ಹಕ್ಕಿಗೆ ಬರುವುದಿಲ್ಲ ಎಂದು ನ್ಯಾಯಪೀಠ ಬೊಟ್ಟುಮಾಡಿದೆ.
ಈ ವಿಷಯಗಳಲ್ಲಿ ಹೇಗೆ ಮುಂದುವರಿಯಬೇಕು ಎಂಬುದರ ಕುರಿತು ದೇವಸ್ವಂ ಮಂಡಳಿಗೆ ನಿರ್ದೇಶನ ನೀಡುವ ಅಧಿಕಾರ ಸರ್ಕಾರಕ್ಕೆ ಇಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿದೆ. ಪರಿಹಾರ ನಿಧಿಗೆ ದೇಣಿಗೆ ನೀಡಿದ ಮೊತ್ತವನ್ನು ಮರಳಿ ಹೇಗೆ ವಸೂಲಿ ಮಾಡುವುದು ಎಂದು ನಿರ್ಧರಿಸಲು ಹೈಕೋರ್ಟ್ ವಿಭಾಗೀಯ ಪೀಠಕ್ಕೆ ನಿರ್ದೇಶನ ನೀಡಿತು.