ಕಾಸರಗೋಡು: ದೈತ್ಯ ತಿಮಿಂಗಿಲದ ಮೃತದೇಹ ಜಿಲ್ಲೆಯ ಕರಾವಳಿಯ ಸಮುದ್ರದಲ್ಲಿ ತೇಲುತ್ತಿರುವುದು ವ್ಯಾಪಕ ಸಂಶಯ ಹಾಗೂ ಆಶ್ಚರ್ಯಗಳಿಗೆ ಎಡೆಮಾಡಿದೆ. ಜಿಲ್ಲಾ ಕರಾವಳಿ ಪೋಲೀಸರ ಗಸ್ತು ತಂಡ ತಿಮಿಂಗಿಲಗಳ ಮೃತದೇಹಗಳು ತೇಲುತ್ತಿರುವುದನ್ನು ಪತ್ತೆ ಮಾಡಿದೆ. 10 ಟನ್‍ಗಿಂತ ಹೆಚ್ಚು ತೂಕವಿರುವ ತಿಮಿಂಗಿಲವು 30 ಮೀಟರ್ ಉದ್ದ ಮತ್ತು 10 ಮೀಟರ್ ಅಗಲವಿದೆ ಎಂದು ಎಎಸ್‍ಐ ಸೈಫುದ್ದೀನ್ ನೀಲೇಶ್ವರಂ ಮಾಹಿತಿ ನೀಡಿರುವರು. ಕೊಚ್ಚಿಯ ಓಷಿಯೋಗ್ರಾಫಿಕ್ ವಿಶ್ವವಿದ್ಯಾಲಯದ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ.
ಸಮುದ್ರದಲ್ಲಿನ ಪರ್ವತದಂತಹ ವಸ್ತು:
ಕಾಸರಗೋಡು ಕೋಸ್ಟ್ ಗಾರ್ಡ್ ಶುಕ್ರವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ಸಮುದ್ರದಲ್ಲಿ ನಿಯಮಿತವಾಗಿ ಗಸ್ತು ತಿರುಗುತ್ತಿದ್ದಾಗ ಎಎಸ್‍ಐಗಳಾದ ಸೈಫುದ್ದೀನ್, ಅಜೀಜ್, ವಾರ್ಡನ್ ರಮೇಶನ್ ಮಾಯಿಚಾ ಮತ್ತು ಸ್ಪೆಷಲ್ ಮೆರೈನ್ ಹೋಮ್ ಗಾರ್ಡ್ ದಾಮೋದರನ್ ನೇತೃತ್ವದ ತಂಡವು ಇನ್ಸ್‍ಪೆಕ್ಟರ್ ರಾಜೀವ್ ವಲಿಯವಳಪ್ಪು ಅವರ ಸೂಚನೆಯ ಮೇರೆಗೆ ತಳಂಗರೆಯಿಂದ ಹೊರಟಿತ್ತು. ಮಧ್ಯಾಹ್ನದ ಹೊತ್ತಿಗೆ ಕಾಞಂಗಾಡ್ ಕರಾವಳಿಯನ್ನು ತಲುಪಿತು. ಈ ಸಂದರ್ಭ ದೋಣಿ ನಿರ್ವಾಹಕ ನಾರಾಯಣನ್ ಎಂಬವರು ಸಮುದ್ರದಲ್ಲಿ ಪರ್ವತದಂತೆ ಕಾಣಿಸುವ ವಸ್ತುವಿನ ಬಗ್ಗೆ ಅಧಿಕಾರಿಗಳ ಗಮನ ಸೆಳೆದರು. ಬಳಿಕ ಅತ್ತ ತೆರಳಿ ಗಮನಿಸಿದಾಗ ಸತ್ತ ತಿಮಿಂಗಿಲ ಎಂದು ತಿಳಿದುಬಂತು.
ಒಂದು ತಿಂಗಳು ಹಳೆಯದು:
ನೀಲೇಶ್ವರ ಮತ್ತು ಕಾಞಂಗಾಡ್ ನಡುವೆ 10 ನಾಟಿಕಲ್ ಮೈಲ್ ದೂರದಲ್ಲಿ ಶವ ಪತ್ತೆಯಾಗಿದೆ. ದುರ್ವಾಸನೆಯಿಂದಾಗಿ ದೋಣಿಯಲ್ಲಿದ್ದ ಜನರಿಗೆ ಮುಂದೆ ಹೋಗಲು ಸಾಧ್ಯವಾಗಲಿಲ್ಲ. ಮೃತದೇಹ ಕರಾವಳಿಯತ್ತ ತಲುಪಲು ವಾರಗಳನ್ನು ತೆಗೆದುಕೊಳ್ಳುತ್ತದೆ.ತಿಮಿಂಗಿಲ ಸತ್ತು ಕನಿಷ್ಠ ಒಂದು ತಿಂಗಳಾದರೂ ಆಗಿರಬಹುದೆಂದು ಪೋಲೀಸರು ಹೇಳುತ್ತಾರೆ. ತಿಮಿಂಗಿಲದ ಶವ ಧಪನಕ್ಕೆ ಸಮುದ್ರ ಸಂಶೋಧನಾ ಕೇಂದ್ರ ಮತ್ತು ಕೇಂದ್ರದ ಅನುಮತಿ ಬೇಕು ಎಂದು ಅಧಿಕಾರಿಗಳು ಹೇಳಿದ್ದಾರೆ.
ಅರೇಬಿಯನ್ ಸಮುದ್ರದಲ್ಲಿ ತಿಮಿಂಗಿಲ:
ಎರಡು ವರ್ಷಗಳ ಹಿಂದೆ ಜಿಲ್ಲೆಯ ಕರಾವಳಿಯಲ್ಲಿ ಸುಮಾರು 10 ತಿಮಿಂಗಿಲಗಳು ಶವವಾಗಿ ಪತ್ತೆಯಾಗಿವೆ. ತಿಮಿಂಗಿಲದ ದೇಹದಿಂದ ದುಬಾರಿ ಐಷಾರಾಮಿ ಸುಗಂಧ ದ್ರವ್ಯಗಳನ್ನು ತಯಾರಿಸಲು ಕೊಲೆಗೈಯ್ಯುವ ತಂಡಗಳೂ ಇದ್ದು ಅವರ ಕರಾಮತ್ತಿನ ಕಾರಣ ಈ ರೀತಿಯಲ್ಲಿ ತಿಮಿಂಗಿಲಗಳು ಸಾಯುತ್ತಿವೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ತಿಮಿಂಗಿಲದ ವಾಂತಿ, ಅಥವಾ ಅಂಬಗ್ರ್ರಿಸ್ ಗೆ ಮಾರುಕಟ್ಟೆಯಲ್ಲಿ ಕಿಲೋಗೆ ಒಂದು ಮಿಲಿಯನ್ ಡಾಲರ್ ವರೆಗೆ ಬೆಲೆಯಿದೆ ಎನ್ನಲಾಗಿದೆ. ಹವಾಮಾನ ಬದಲಾವಣೆ ಮತ್ತು ಹಡಗು ಒಡೆಯುವಿಕೆಯಿಂದ ತಿಮಿಂಗಿಲಗಳು ಸಾಯಬಹುದು ಎಂದೂ ಅಧಿಕಾರಿಗಳು ಹೇಳುತ್ತಾರೆ.