ನವದೆಹಲಿ: ಬ್ರಿಟನ್‌ನಲ್ಲಿ ಕಾಣಿಸಿಕೊಂಡಿರುವ ಹೊಸ ಪ್ರಭೇದದ ಕೊರೋನಾ ವೈರಸ್ ಇದೀಗ ಜಗತ್ತಿನಾದ್ಯಂತ ಆತಂಕ ಸೃಷ್ಟಿಸಿದೆ. ಈ ಮಧ್ಯೆ ಬ್ರಿಟನ್‌ನಿಂದ ದೆಹಲಿಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ 11 ಮಂದಿಗೆ ಕೊರೋನಾ ವೈರಸ್ ಪತ್ತೆಯಾಗಿದೆ.
ಬ್ರಿಟನ್‌ನಿಂದ ನಾಲ್ಕು ವಿಮಾನಗಳಲ್ಲಿ ಆಗಮಿಸಿದ್ದ ಪ್ರಯಾಣಿಕರ ಪೈಕಿ ಹನ್ನೊಂದು ಪ್ರಯಾಣಿಕರಿಗೆ ಕೊರೋನಾ ಪಾಸಿಟಿವ್ ಬಂದಿದೆ ಎಂದು ಜಿನೆಸ್ಟ್ರಿಂಗ್ಸ್ ಡಯಾಗ್ನೋಸ್ಟಿಕ್ ಸೆಂಟರ್ ಸಂಸ್ಥಾಪಕ ಗೌರಿ ಅಗರ್ವಾಲ್ ಹೇಳಿದ್ದಾರೆ.
ದೆಹಲಿ ವಿಮಾನ ನಿಲ್ದಾಣದಲ್ಲಿ ಜೆನೆಸ್ಟ್ರಿಂಗ್ಸ್ ಎಲ್ಲಾ ಪ್ರಯಾಣಿಕರ ಕೊರೋನಾವೈರಸ್ ಪರೀಕ್ಷೆಯನ್ನು ನಿರ್ವಹಿಸುತ್ತಿದೆ. ಬ್ರಿಟನ್‌ನಿಂದ ಆಗಮಿಸಿದ ನಾಲ್ಕು ವಿಮಾನಗಳ 50 ಪ್ರಯಾಣಿಕರನ್ನು ಸಾಂಸ್ಥಿಕ ಸಂಪರ್ಕತಡೆಗೆ ಒಳಪಡಿಸಲಾಗಿದೆ.
ಬ್ರಿಟನ್‌ನಲ್ಲಿ ಹೊಸ ಕೊರೋನಾವೈರಸ್ ಪ್ರಭೇದ ಕಾಣಿಸಿಕೊಳ್ಳುತ್ತಿದ್ದಂತೆ ಅಲ್ಲಿಂದ ಬರುವ ಎಲ್ಲಾ ಪ್ರಯಾಣಿಕರನ್ನು ಭಾರತೀಯ ವಿಮಾನ ನಿಲ್ದಾಣಗಳಲ್ಲಿ ಪರೀಕ್ಷೆಗೊಳಿಸಬೇಕು ಎಂದು ಕೇಂದ್ರ ಸರ್ಕಾರ ನಿರ್ದೇಶನ ನೀಡಿತ್ತು. ಈ ನಿರ್ದೇಶನದಂತೆ ಒಟ್ಟು ನಾಲ್ಕು ಯುಕೆ ವಿಮಾನಗಳು ದೆಹಲಿಗೆ ಬಂದಿವೆ ಎಂದು ಅಗರ್ವಾಲ್ ಹೇಳಿದ್ದಾರೆ.
ಬ್ರಿಟನ್ ನಿಂದ ಆಗಮಿಸಿದ ಓರ್ವ ಪ್ರಯಾಣಿಕನಿಗೆ ಕೊರೋನಾ ದೃಢಪಟ್ಟರೆ ಆತ ಕುಳಿತಿದ್ದ ಸೀಟಿನ ಅಕ್ಕ ಪಕ್ಕ ಕುಳಿತ್ತಿದ್ದವರು, ಹಿಂದಿನ ಮೂರು ಸಾಲು ಮತ್ತು ಮುಂದಿನ ಮೂರು ಸಾಲಿನಲ್ಲಿ ಕುಳಿತಿದ್ದವರನ್ನು ಸಾಂಸ್ಥಿಕ ಕ್ವಾರಂಟೈನ್ ಗೆ ಕಳುಹಿಸಲು ಸರ್ಕಾರ ತಿಳಿಸಿದೆ.
ಲಂಡನ್‌ನಿಂದ ಆಗಮಿಸಿದ್ದ 950ಕ್ಕೂ ಹೆಚ್ಚು ಪ್ರಯಾಣಿಕರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು ಈ ಪೈಕಿ 11 ಜನರಲ್ಲಿ ಕೊರೋನಾ ದೃಢಪಟ್ಟಿದೆ.