ತಿರುವನಂತಪುರಂ, ಡಿಸೆಂಬರ್ 5: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ದರ್ಶನಕ್ಕೆ ಆನ್‌ಲೈನ್ ಸರದಿ ವ್ಯವಸ್ಥೆಯ ಬುಕಿಂಗ್ ಪ್ರಕ್ರಿಯೆ ಆರಂಭವಾದ 12 ಗಂಟೆಯಲ್ಲಿಯೇ ಮುಕ್ತಾಯವಾಗಿದೆ. ದೈನಂದಿನ ಭಕ್ತರ ಪ್ರವೇಶದ ಮಿತಿಯನ್ನು ಸರ್ಕಾರ 1,000 ದಿಂದ 2,000ಕ್ಕೆ ಹೆಚ್ಚಿಸಿದ ಬಳಿಕ ಬುಕಿಂಗ್ ಕಾರ್ಯವನ್ನು ಪುನಃ ಆರಂಭಿಸಲಾಗಿತ್ತು. ಅದನ್ನು ಗುರುವಾರ ಬೆಳಿಗ್ಗೆ 5 ಗಂಟೆಗೆ ಸ್ಥಗಿತಗೊಳಿಸಲಾಯಿತು.
ಪರಿಷ್ಕೃತ ಸಂಖ್ಯೆಗೆ ಅನುಗುಣವಾಗಿ ಈ ಬಾರಿ ಮಕರವಿಳಕ್ಕು ಅವಧಿಯಲ್ಲಿ ಒಟ್ಟು 44,000 ಭಕ್ತರು ಪವಿತ್ರ ದೇವಸ್ಥಾನಕ್ಕೆ ಭೇಟಿ ನೀಡಲು ಅವಕಾಶವಿದೆ. ಮಂಡಲ ಮಕರವಿಳಕ್ಕು ಅವಧಿಯಲ್ಲಿ ಇದುವರೆಗಿನ ಭಕ್ತರ ಭೇಟಿಯ ಸಂಖ್ಯೆಯನ್ನು ಹೋಲಿಸಿದರೆ ಈ ಬಾರಿ ಕೋವಿಡ್ ಕಾರಣದಿಂದ ಅತಿ ಕಡಿಮೆ ಭಕ್ತರು ಭೇಟಿ ನೀಡುವಂತಾಗಿದೆ. ಪ್ರತಿ ವರ್ಷ ದಿನವೂ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಿದ್ದರು.
ಇತ್ತೀಚಿನ ಗವಾಕ್ಷಿಯಲ್ಲಿ ಟಿಕೆಟ್ ಬಯಸಿದ ಒಟ್ಟು ಭಕ್ತರಲ್ಲಿ ಕೇರಳದ ಭಕ್ತರ ಸಂಖ್ಯೆ ಕೇವಲ ಶೇ 12ರಷ್ಟಿದೆ ಎಂದು ಮೂಲಗಳು ತಿಳಿಸಿವೆ. ಇನ್ನು ಅರ್ಧದಷ್ಟು ಮಂದಿ ತಮಿಳುನಾಡಿನ ಭಕ್ತರಾಗಿದ್ದಾರೆ. ಬಳಿಕ ಕರ್ನಾಟಕ ಮತ್ತು ಆಂಧ್ರಪ್ರದೇಶದ ಭಕ್ತರಿದ್ದಾರೆ.