ನವದೆಹಲಿ: ದೇಶದಾದ್ಯಂತ ಕಳೆದ 10 ದಿನದಲ್ಲಿ 1 ಕೋಟಿ ಕೋವಿಡ್-19 ಪರೀಕ್ಷೆಗಳು ನಡೆದಿದ್ದು, ಇಲ್ಲಿಯವರೆಗೂ ಒಟ್ಟು ಪರೀಕ್ಷೆಯ ಸಂಖ್ಯೆ 15 ಕೋಟಿ ದಾಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಗುರುವಾರ ಪ್ರಕಟಿಸಿದೆ.
ಹೆಚ್ಚಿನ ಪರೀಕ್ಷೆಗಳ ಮುಖಾಂತರ ಕೋವಿಡ್-19 ಪ್ರಕರಣಗಳ ಸಂಖ್ಯೆಯೂ ಇಳಿಕೆಯಾಗಿದೆ ಎಂದು ಸಚಿವಾಲಯವು ತಿಳಿಸಿದೆ. ಕಳೆದ ಸತತ 11 ದಿನದಿಂದ ಪ್ರತಿನಿತ್ಯ ದೃಢಪಡುತ್ತಿರುವ ಕೋವಿಡ್ ಪ್ರಕರಣಗಳ ಸಂಖ್ಯೆ 40 ಸಾವಿರಕ್ಕಿಂತ ಕಡಿಮೆಯಾಗಿದೆ.
ಗುರುವಾರ ಬೆಳಗ್ಗೆ 8 ಗಂಟೆಯವರೆಗಿನ ಹಿಂದಿನ 24 ಗಂಟೆಗಳಲ್ಲಿ ಹೊಸದಾಗಿ 31,521 ಪ್ರಕರಣಗಳು ವರದಿಯಾಗಿದ್ದು, ಪ್ರಕರಣಗಳ ಸಂಖ್ಯೆ 97.67 ಲಕ್ಷಕ್ಕೆ ಏರಿದೆ. 412 ಜನರು ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 1,41,772ಕ್ಕೆ ಏರಿದೆ.
ಇದೇ ಅವಧಿಯಲ್ಲಿ 37,725 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಸೋಂಕಿನಿಂದ ಗುಣಮುಖರಾದವರ ಒಟ್ಟು ಸಂಖ್ಯೆ 92.5 ಲಕ್ಷವನ್ನು ದಾಟಿದೆ. ದೇಶದಲ್ಲಿ ಪ್ರಸ್ತುತ 3,72,293 ಸಕ್ರಿಯ ಪ್ರಕರಣಗಳಿದ್ದು, ಇದು ಒಟ್ಟು ಕೋವಿಡ್ ಪ್ರಕರಣದ ಶೇ 3.81ರಷ್ಟು ಮಾತ್ರ ಎಂದೂ ಸಚಿವಾಲಯವು ವರದಿಯಲ್ಲಿ ತಿಳಿಸಿದೆ.