ನವದೆಹಲಿ: ವಾಹನ ಸವಾರರಿಗೆ ಇಲ್ಲಿದೆ ಗುಡ್ ನ್ಯೂಸ್, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಫಾಸ್ಟ್‌ಟ್ಯಾಗ್ ಡೆಡ್‌ಲೈನ್ ಅನ್ನು ಮತ್ತೆ ವಿಸ್ತರಿಸಿದ್ದು, ಫೆಬ್ರವರಿ 15ರವರೆಗೆ ಅವಕಾಶ ನೀಡಿದೆ.
ಈ ಹಿಂದೆ ಹೊಸ ವರ್ಷದ ಆರಂಭದಿಂದಲೇ ಅಂದರೆ ಜನವರಿ 1, 2021ರಿಂದ ದೇಶದ ಎಲ್ಲಾ ವಾಹನಗಳಿಗೆ ಫಾಸ್ಟ್‌ಟ್ಯಾಗ್ ಕಡ್ಡಾಯವಾಗಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಗುರುವಾರ (ಡಿ.24) ಪ್ರಕಟಿಸಿದರು. ಆದರೆ ಈಗ ಸ್ವಲ್ಪ ವಿನಾಯಿತಿ ನೀಡಲಾಗಿದ್ದು, ಫೆಬ್ರವರಿ 15ರವರೆಗೆ ಅವಕಾಶವನ್ನು ನೀಡಲಾಗಿದೆ.
2017 ರ ಡಿಸೆಂಬರ್ 1 ರ ಮೊದಲು ಮಾರಾಟವಾದ ವಾಹನಗಳಿಗೆ ಫಾಸ್ಟ್‌ಟ್ಯಾಗ್ ಕಡ್ಡಾಯಗೊಳಿಸುವುದಾಗಿ ಕೇಂದ್ರ ಸರ್ಕಾರ ಘೋಷಿಸಿತ್ತು. ಮೋಟಾರು ವಾಹನ ಕಾಯ್ದೆ 1989 ರ ಅಡಿಯಲ್ಲಿ ಕೇಂದ್ರ ಸರ್ಕಾರವು ಎಲ್ಲಾ ವಾಹನ ತಯಾರಕರು ಮತ್ತು ವಿತರಕರಿಗೆ ವಾಹನ ನೋಂದಣಿ ಸಮಯದಲ್ಲಿ ಫಾಸ್ಟ್‌ಟ್ಯಾಗ್ ನೀಡುವಂತೆ ಆದೇಶಿಸಿತ್ತು.
ಪ್ರಸ್ತುತ ಫಾಸ್ಟ್‌ಟ್ಯಾಗ್ ವ್ಯವಹಾರಗಳ ಪಾಲು ಶೇಕಡಾ 75-80 ರಷ್ಟು ಆಸುಪಾಸಿನಲ್ಲಿದೆ. ಫೆಬ್ರವರಿ 15ರಿಂದ ಶೇಕಡಾ 100ರಷ್ಟು ನಗದುರಹಿತ ಶುಲ್ಕ ಪಾವತಿಗೆ ಹೆದ್ದಾರಿ ಪ್ರಾಧಿಕಾರದಿಂದ ಅಗತ್ಯ ನಿಯಂತ್ರಣವನ್ನು ಪಡೆಯಬಹುದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ನೀಡಿರುವ ಹೇಳಿಕೆಯಲ್ಲಿ ಸಚಿವಾಲಯ ತಿಳಿಸಿದೆ.
ವಾಹನದಲ್ಲಿನ ಫಾಸ್ಟ್‌ಟ್ಯಾಗ್ 5 ವರ್ಷಗಳ ಮಾನ್ಯತೆಯನ್ನು ಹೊಂದಿದೆ, ಅದರ ನಂತರ ನೀವು ವಾಹನದಲ್ಲಿ ಹೊಸ ಫಾಸ್ಟ್‌ಟ್ಯಾಗ್ ಅನ್ನು ಹಾಕಬೇಕಾಗುತ್ತದೆ.