ಚಂಡೀಗಡ: ಕಳೆದ 24 ಗಂಟೆ ಅವಧಿಯಲ್ಲಿ ಪಂಜಾಬ್‌ನ ವಿವಿಧ ಭಾಗಗಳಲ್ಲಿ 176 ಮೊಬೈಲ್ ಟವರ್‌ಗಳಿಗೆ ಹಾನಿ ಉಂಟು ಮಾಡಲಾಗಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.
ಕೇಂದ್ರದ ಮೂರು ಕೃಷಿ ಕಾಯ್ದೆಗಳ ಬಗ್ಗೆ ಉಂಟಾಗಿರುವ ತಪ್ಪು ಕಲ್ಪನೆಗಳಿಂದಾಗಿ ವಿವಿಧ ಭಾಗಗಳಲ್ಲಿ ರೈತರು ಮೊಬೈಲ್ ಟವರ್‌ಗಳಿಗೆ, ವಿಶೇಷವಾಗಿ ರಿಲಯನ್ಸ್ ಸಂಸ್ಥೆಗೆ ಸೇರಿದ 'ಜಿಯೊ ಟವರ್'ಗಳಿಗೆ ಹಾನಿ ಉಂಟುಮಾಡುತ್ತಿದ್ದಾರೆ.
ಅದಾನಿ ಅಥವಾ ಮುಕೇಶ್ ಅಂಬಾನಿ ಒಡೆತನದ ಯಾವ ಸಂಸ್ಥೆಯೂ ಕೃಷಿ ಉತ್ಪನ್ನಗಳನ್ನು ಖರೀದಿಸುವುದಿಲ್ಲ. ಆದರೂ, 'ಹೊಸ ಕಾಯ್ದೆಗಳಿಂದ ಅದಾನಿ- ಅಂಬಾನಿ ಅವರಿಗೆ ಹೆಚ್ಚಿನ ಲಾಭವಾಗಲಿದೆ' ಎಂಬ ಭಾವನೆ ರೈತರಲ್ಲಿ ಮೂಡಿದೆ. ಇದರಿಂದಾಗಿ ಈ ಸಂಸ್ಥೆಗಳಿಗೆ ಸೇರಿದ ಆಸ್ತಿಪಾಸ್ತಿಗೆ ಹಾನಿ ಉಂಟುಮಾಡುತ್ತಿದ್ದಾರೆ ಎಂದು ಹೇಳಲಾಗಿದೆ. ಟೆಲಿಕಾಂ ಕ್ಷೇತ್ರದ ಇತರ ಸಂಸ್ಥೆಗಳ ಆಸ್ತಿಪಾಸ್ತಿಗೂ ಕೆಲವೆಡೆ ಹಾನಿ ಉಂಟುಮಾಡಲಾಗಿದೆ.
ರೈತರ ಪ್ರತಿಭಟನೆ ಆರಂಭವಾದಾಗಿನಿಂದ, ಸುಮಾರು ಒಂದು ತಿಂಗಳಲ್ಲಿ 1,411 ಟವರ್‌ಗಳಿಗೆ ಹಾನಿ ಉಂಟುಮಾಡಲಾಗಿದೆ. ವಿದ್ಯುತ್ ತಂತಿಗಳನ್ನು ಕತ್ತರಿಸಿ, ಟವರ್‌ಗಳಿಗೆ ಸಂಪರ್ಕ ಒದಗಿಸುವ ವ್ಯವಸ್ಥೆಗೆ ಹಾನಿ ಮಾಡುವ ಪ್ರಯತ್ನಗಳು ಸಹ ನಡೆದಿವೆ. ಪ್ರತಿಭಟನಾಕಾರರನ್ನು ತಡೆಯಲು ಮುಂದಾದ ಸೈಟ್ ಮ್ಯಾನೇಜರ್‌ಗಳನ್ನು ನಿಂದಿಸಲಾಗಿದೆ, ಕೆಲವರನ್ನು ಪ್ರತಿಭಟನಾಕಾರರು ಥಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಫಲ ನೀಡದ ಮನವಿ:
'ರೈತರು ಶಾಂತಿ ಕಾಪಾಡಬೇಕು, ಸಾರ್ವಜನಿಕರಿಗೆ ತೊಂದರೆಯಾಗುವಂಥ ಯಾವುದೇ ಕ್ರಮ ಕೈಗೊಳ್ಳಬಾರದು' ಎಂದು ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಶುಕ್ರವಾರ ಮನವಿ ಮಾಡಿದ್ದರು. ಆದರೆ, ಅದಕ್ಕೆ ರೈತರು ಕಿವಿಗೊಡುತ್ತಿಲ್ಲ.
'ಕಳೆದ ಒಂದು ತಿಂಗಳಿಂದ ದೆಹಲಿ ಗಡಿಯಲ್ಲಿ ರೈತರು ಶಿಸ್ತು ಹಾಗೂ ಜವಾಬ್ದಾರಿಯಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಎಲ್ಲಾ ರೈತರು ಅದನ್ನು ಅನುಸರಿಸಬೇಕು. ಕಾನೂನನ್ನು ಕೈಗೆತ್ತಿಕೊಳ್ಳಬಾರದು' ಎಂದು ಅವರು ಮನವಿ ಮಾಡಿದ್ದರು. ಮುಖ್ಯಮಂತ್ರಿಯ ಮನವಿಯ ನಂತರವೂ ಹಲವೆಡೆ ಮೊಬೈಲ್ ಟವರ್‌ಗೆ ಹಾನಿ ಉಂಟುಮಾಡಿರುವುದು ವರದಿಯಾಗಿದೆ.
ವಿದ್ಯಾರ್ಥಿಗಳಿಗೆ ತೊಂದರೆ: ದೂರವಾಣಿ ಸೇವೆಗಳು ಅಸ್ತವ್ಯಸ್ತವಾಗಿದ್ದರಿಂದ ಆನ್‌ಲೈನ್‌ನಲ್ಲಿ ತರಗತಿಗಳಿಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ.