ನವದೆಹಲಿ: ಕೇರಳದಲ್ಲಿ ನಡೆದ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಹಣ ಅಕ್ರಮ ವರ್ಗಾವಣೆ ಕುರಿತು ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವು(ಇ.ಡಿ), ಪ್ರಕರಣಕ್ಕೆ ಸಂಬಂಧಿಸಿದಂತೆ ₹1.85 ಕೋಟಿ ಮೌಲ್ಯದ ಆಸ್ತಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಸಂಸ್ಥೆಯು ಗುರುವಾರ ತಿಳಿಸಿದೆ.
ಜುಲೈ 5ರಂದು ತಿರುವನಂತಪುರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗಲ್ಫ್‌ನಿಂದ ಬಂದ ಏರ್ ಕಾರ್ಗೊದಲ್ಲಿದ್ದ ಬ್ಯಾಗ್ ಒಂದರಲ್ಲಿ 15 ಕೋಟಿ ಮೌಲ್ಯದ 30 ಕೆ.ಜಿ. ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಯುಎಇ ಕಾನ್ಸುಲೇಟ್‌ಗೆ ಇರುವ ರಾಜತಾಂತ್ರಿಕ ಸರಂಜಾಮು ಎಂದು ಬ್ಯಾಗ್ ಅನ್ನು ಮರೆಮಾಚಲು ಪ್ರಯತ್ನಿಸಲಾಗಿತ್ತು. ವಿಯೆನ್ನಾ ಒಪ್ಪಂದದ ಪ್ರಕಾರ ಇಂಥ ವಸ್ತುಗಳನ್ನು ಪರಿಶೀಲಿಸುವುದರಿಂದ ವಿನಾಯಿತಿ ನೀಡಲಾಗಿದೆ.
'ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‌ಎ)ಯಡಿ, ನಿಶ್ಚಿತ ಠೇವಣಿ ಹಾಗೂ ನಗದು ಸೇರಿದಂತೆ ₹1.85 ಕೋಟಿ ಮೌಲ್ಯದ ಆಸ್ತಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ' ಎಂದು ಇ.ಡಿ ತಿಳಿಸಿದೆ.