ನವದೆಹಲಿ: ವಿಶ್ವದಾದ್ಯಂತ ನಡೆಸಿದ ಮೂರು ಮಿಲಿಯನ್ ಕೋವಿಡ್-19 ರೋಗಿಗಳ ಅಧ್ಯಯನವೊಂದರ ಪ್ರಕಾರ, ತೀವ್ರ ನಿಗಾ ಘಟಕ ಐಸಿಯುನಲ್ಲಿ ದಾಖಲಾಗುತ್ತಿರುವ ಹಾಗೂ ಸಾಯುತ್ತಿರುವವರ ಸಂಖ್ಯೆಯಲ್ಲಿ ಪುರುಷರೇ ಹೆಚ್ಚಾಗಿದ್ದಾರೆ. ರಾಜ್ಯದ ವೈದ್ಯರು ಸಹ ಚಿಕಿತ್ಸೆ ಪಡೆದ ರೋಗಿಗಳಲ್ಲಿ ಈ ಮಾದರಿಯನ್ನು ಗಮನಿಸಿದ್ದಾರೆ.
ಓಪನ್ ಅಕ್ಸೆಸ್ ಜರ್ನಲ್ ನ್ಯಾಚುರಲ್ ಕಮ್ಯೂನಿಕೇಷನ್ ನಲ್ಲಿ ಪ್ರಕಟವಾದ ಭಾರತ ಹೊರತುಪಡಿಸಿದಂತೆ 47 ರಾಷ್ಟ್ರಗಳ 3, 111,714 ಸೋಂಕಿತರ ವೈಜ್ಞಾನಿಕ ವಿಶ್ಲೇಷಣೆ ಪ್ರಕಾರ, ಕೋವಿಡ್-19 ರೋಗಕ್ಕೆ ತುತ್ತಾದ ಪುರುಷರು, ಮಹಿಳೆಯರಿಗೆ ಹೋಲಿಸಿದರೆ ಮೂರು ಪಟ್ಟು ಹೆಚ್ಚಾಗಿ ತುರ್ತು ತೀವ್ರ ನಿಗಾ ಘಟಕಕ್ಕೆ ದಾಖಲಾಗುವ ಅಗತ್ಯತೆ ಎದುರಾಗಿದ್ದು, ಸಾವಿನ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ.
ಪುರುಷರು ಮತ್ತು ಮಹಿಳೆಯರಲ್ಲಿ ಸಮಾನವಾಗಿ ಸಾರ್ಸ್ - ಕೋವ್-2 ಸೋಂಕು ತಗುಲುವ ಅವಕಾಶ ಇರುವುದು ಈ ಅಧ್ಯಯನದಲ್ಲಿ ತಿಳಿದುಬಂದಿದೆ. ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಈ ಪ್ರವೃತ್ತಿ ಕಂಡುಬಂದಿದ್ದು, ಕರ್ನಾಟಕದಲ್ಲೂ ಈ ಮಾದರಿಯನ್ನು ಗಮನಿಸಿರುವುದಾಗಿ ಕರ್ನಾಟಕ ಕ್ರಿಟಿಕಲ್ ಕೇರ್ ಸಪೆÇೀರ್ಟ್ ಟೀಮ್ ಸದಸ್ಯ ಡಾ. ಅನೂಪ್ ಅಮರನಾಥ್ ಹೇಳಿದ್ದಾರೆ.
ರಾಜ್ಯದಲ್ಲಿ ಮಹಿಳೆಯರಿಗೆ ಹೋಲಿಸಿದರೆ ಪುರುಷರೇ ಹೆಚ್ಚಾಗಿ ಸಾವನ್ನಪ್ಪಿರುವುದು ಕಂಡುಬಂದಿದೆ. ಡಿಸೆಂಬರ್ 11ರ ಮಾಹಿತಿ ಪ್ರಕಾರ, ಒಟ್ಟಾರೇ 11,928 ಮರಣಗಳ ಪೈಕಿ ಶೇ. 71 ರಷ್ಟು ಅಂದರೆ 8,552 ಮಂದಿ ಪುರುಷರೇ ಸಾವನ್ನಪ್ಪಿದ್ದಾರೆ. ಇದಕ್ಕೆ ಕಾರಣ ಏನು ಎಂಬುದು ಪೂರ್ಣವಾಗಿ ಅರ್ಥವಾಗಿಲ್ಲ. ಇದು ವಾಸ್ತವ ಅಂಶವಾಗಿದ್ದು, ಹೆಚ್ಚಿನ ಅಧ್ಯಯನ ಅಗತ್ಯವಾಗಿದೆ ಎಂದು ಡಾ.ಅಮರ್ ನಾಥ್ ತಿಳಿಸಿದರು.
ಐಸಿಯುನಲ್ಲಿರುವ 421 ಜನರ ಪೈಕಿ ಕೇವಲ 110 ಮಹಿಳೆಯರಾಗಿದ್ದಾರೆ. ಸಾವನ್ನಪ್ಪಿದ್ದ 54 ಜನರಲ್ಲಿ ಕೇವಲ 12 ಮಂದಿ ಮಾತ್ರ ಮಹಿಳೆಯರಾಗಿದ್ದಾರೆ ಎಂದು ಪ್ರಕೃತಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಸೋಮನಾಥ್ ಚಟರ್ಜಿ ತಮ್ಮ ಅನುಭವವನ್ನು ಹಂಚಿಕೊಂಡರು.
ಡಿಸೆಂಬರ್ 9ರ ಅಧಿಕೃತ ಮಾಹಿತಿ ಪ್ರಕಾರ, 3,25,999 ಪುರುಷರು, 1,40,993 ಮಹಿಳೆಯರು ಕೋವಿಡ್-19 ಸೋಂಕಿಗೆ ತುತ್ತಾಗಿದ್ದಾರೆಯ ಈ ಪೈಕಿ 2876 ಪುರುಷರು ಮತ್ತು 1,334 ಮಹಿಳೆಯರು ಸಾವನ್ನಪ್ಪಿದ್ದಾರೆ. ಪುರುಷರಲ್ಲಿ ಸಾವಿನ ಪ್ರಮಾಣ ಹೆಚ್ಚಾಗಲು ಧೂಮಪಾನ ಕಾರಣವಾಗಿರಬಹುದು ಎಂದು ಡಾ. ಚಟರ್ಜಿ ಹೇಳಿದರು.