ನವದೆಹಲಿ: 'ಮಾರ್ಗಸೂಚಿ ಹಾಗೂ ಪ್ರಮಾಣಿತ ಕಾರ್ಯಾಚರಣೆ ವಿಧಾನಗಳ (ಎಸ್‌ಒಪಿ) ಪರಿಣಾಮಕಾರಿ ಅನುಷ್ಠಾನದ ಕೊರತೆಯಿಂದಾಗಿ ದೇಶದಲ್ಲಿ ಕೋವಿಡ್-19 ಪಿಡುಗು ಕಾಳ್ಗಿಚ್ಚಿನಂತೆ ಹರಡುತ್ತಿದೆ' ಎಂದು ಸುಪ್ರೀಂಕೋರ್ಟ್ ಶುಕ್ರವಾರ ಹೇಳಿದೆ.
ಕೋವಿಡ್ ನ್ನು 'ಜಾಗತಿಕ ಸಮರ'ವೆಂದು ಉಲ್ಲೇಖಿಸಿರುವ ನ್ಯಾಯಾಲಯವು 'ಈ ಸಾಂಕ್ರಾಮಿಕ ರೋಗದಿಂದಾಗಿ ಪ್ರಪಂಚದಲ್ಲಿ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ' ಎಂದು ತಿಳಿಸಿದೆ.
'ಕರ್ಫ್ಯೂ ಅಥವಾ ಲಾಕ್‌ಡೌನ್ ಹೇರುವ ಸಂಬಂಧ ಸಾಕಷ್ಟು ಮುಂಚಿತವಾಗಿಯೇ ಪ್ರಕಟಣೆ ಹೊರಡಿಸಬೇಕು. ಆಗ ಜನರು ತಮ್ಮ ಜೀವನ ನಿರ್ವಹಣೆಗೆ ಬೇಕಾದ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲು ಅನುಕೂಲವಾಗಲಿದೆ' ಎಂದು ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ತ್ರಿಸದಸ್ಯ ಪೀಠ ಹೇಳಿತು.
'ಕೊರೊನಾ ಹಿನ್ನೆಲೆಯಲ್ಲಿ ವೈದ್ಯರು ಹಾಗೂ ಶುಶ್ರೂಶಕಿಯರನ್ನೊಳಗೊಂಡ ಆರೋಗ್ಯ ಕಾರ್ಯಕರ್ತರ ತಂಡವು ಎಂಟು ತಿಂಗಳಿಂದ ಹಗಲಿರುಳೆನ್ನದೆ ಕೆಲಸ ಮಾಡುತ್ತಿದ್ದು, ಮಾನಸಿಕ ಹಾಗೂ ದೈಹಿಕವಾಗಿ ಸಾಕಷ್ಟು ದಣಿದಿದೆ. ಅವರಿಗೆ ವಿಶ್ರಾಂತಿ ನೀಡುವ ನಿಟ್ಟಿನಲ್ಲಿ ಚಿಂತಿಸಬೇಕಿದೆ. ಈ ಸಂದಿಗ್ಧ ಸಮಯದಲ್ಲಿ ರಾಜ್ಯ ಸರ್ಕಾರಗಳು ಕೇಂದ್ರದೊಟ್ಟಿಗೆ ಕೆಲಸ ಮಾಡಬೇಕಿದೆ. ದೇಶದ ನಾಗರಿಕರ ಆರೋಗ್ಯ ಮತ್ತು ಸುರಕ್ಷತೆ ಮೊದಲ ಆದ್ಯತೆಯಾಗಬೇಕಿದೆ' ಎಂದೂ ನ್ಯಾಯಮೂರ್ತಿಗಳಾದ ಆರ್.ಎಸ್.ರೆಡ್ಡಿ ಹಾಗೂ ಎಂ.ಆರ್.ಶಾ ಅವರಿದ್ದ ಪೀಠವು ತಿಳಿಸಿದೆ.