ಚೆನ್ನೈ: 'ಕೋವಿಡ್ 19ʼ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂಬ ನಿಯಮ ವಿಧಿಸುವುದರೊಂದಿಗೆ ತಮಿಳುನಾಡು ಸರ್ಕಾರ ಮುಂದಿನ ತಿಂಗಳು ನಡೆಯಲಿರುವ ಸಾಂಪ್ರದಾಯಿಕ ʻಜಲ್ಲಿಕಟ್ಟುʼ ಕ್ರೀಡೆಗೆ ಅನುಮತಿ ನೀಡಿದೆ.
ಜಲ್ಲಿಕಟ್ಟು ಕ್ರೀಡೆ ವೀಕ್ಷಣೆಗೆ 300 ಮಂದಿ ಭಾಗವಹಿಸಬಹುದು. ಮತ್ತೊಂದು ವಿಶಿಷ್ಟ ಕ್ರೀಡೆ ʼಎರಧು ವಿದುಮ್ ನಿಗಾಜ್ಜಿʼಯಲ್ಲಿ ಪಾಲ್ಗೊಳ್ಳಲು 150 ಮಂದಿಗೆ ಮಾತ್ರ ಅನುಮತಿ ನೀಡಲಾಗುತ್ತಿದೆ.
ಈ ಕ್ರೀಡೆಗಳು ನಡೆಯುವ ತಾಣಗಳಿಗೆ ಪ್ರವೇಶಿಸುವ ಮೊದಲು ವೀಕ್ಷಕರನ್ನು ಥರ್ಮಲ್ ಸ್ಕ್ಯಾನಿಂಗ್‌ಗೆ ಒಳಪಡಿಸಲಾಗುತ್ತದೆ. ಎಲ್ಲರೂ ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಬೇಕು, ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು ಎಂದು ಸರ್ಕಾರದ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ʻಕೋವಿಡ್ 19ʼ ಸೋಂಕು ಪರೀಕ್ಷೆಯ ನೆಗೆಟಿವ್ ವರದಿ ಇದ್ದವರಿಗೆ ಮಾತ್ರ ಜಲ್ಲಿಕಟ್ಟು ಕ್ರೀಡೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗುತ್ತಿದೆ. ಈ ಕ್ರೀಡೆಯಲ್ಲಿ ಪಾಲ್ಗೊಳ್ಳುವವರು ಕಡ್ಡಾಯವಾಗಿ ಸರ್ಕಾರದ ಅಧಿಕೃತ ಪ್ರಯೋಗಾಲಯಗಳಲ್ಲಿ'ಕೋವಿಡ್ 19ʼ ಪರೀಕ್ಷೆ ಮಾಡಿಸಬೇಕು. ತಮಿಳುನಾಡಿನಲ್ಲಿ ಕೋವಿಡ್ 19 ಸೋಂಕು ಪರೀಕ್ಷಿಸುವ 235 ಪ್ರಯೋಗಾಲಯಗಳಿವೆ.
2021 ಜನವರಿಯಲ್ಲಿ ನಡೆಯುವ ಜಲ್ಲಿಕಟ್ಟು ಕ್ರೀಡೆಗಾಗಿ ಪ್ರತ್ಯೇಕ ಮಾರ್ಗಸೂಚಿಯನ್ನು ಶೀಘ್ರವೇ ಬಿಡುಗಡೆ ಮಾಡಲಾಗುತ್ತದೆ ಎಂದು ಸರ್ಕಾರ ಹೇಳಿದೆ.