ನವದೆಹಲಿ: ದೇಶದಲ್ಲಿ ಕೋವಿಡ್-19 ಲಸಿಕೆ ವಿತರಣೆಯನ್ನು ಬೆಂಬಲಿಸುವ ನಿಟ್ಟಿನಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ಸಂವಹನ ಕಾರ್ಯತಂತ್ರವನ್ನು ಬಿಡುಗಡೆ ಮಾಡಿದೆ. ಆತಂಕಗಳನ್ನು ನಿವಾರಿಸಿ, ಲಸಿಕೆ ಸ್ವೀಕರಿಸಬಹುದು ಎಂಬ ಖಾತ್ರಿಯೊಂದಿಗೆ ನಿಖರ ಮತ್ತು ಪಾರದರ್ಶಕ ರೀತಿಯಲ್ಲಿ ಮಾಹಿತಿ ಪ್ರಸಾರಕ್ಕೆ ಪ್ರಯತ್ನಿಸಲಾಗುತ್ತಿದೆ.
88 ಪುಟಗಳ ಸಮಗ್ರ ದಾಖಲೆಯ ಮಾಹಿತಿಯೊಂದಿಗೆ ರಾಷ್ಟ್ರೀಯ, ರಾಜ್ಯ ಮತ್ತು ಜಿಲ್ಲಾ ಮಟ್ಟದ ಸಂವಹನ ಚಟುವಟಿಕೆಗಳಿಗೆ ಮಾರ್ಗದರ್ಶನ ನೀಡುತ್ತಿದ್ದು, ಕೋವಿಡ್ -19 ಲಸಿಕೆ ಮತ್ತು ಲಸಿಕೆ ವಿತರಣಾ ಪ್ರಕ್ರಿಯೆ ದೇಶಾದ್ಯಂತ ಎಲ್ಲಾ ರಾಜ್ಯಗಳಲ್ಲಿ, ಎಲ್ಲಾ ಜನರಿಗೂ ತಲುಪುವಂತೆ ಮಾಹಿತಿ ನೀಡಲಾಗುತ್ತಿದೆ.
ಲಸಿಕೆಗಾಗಿ ಅನಿಯಮಿತ ಬೇಡಿಕೆ ಎದುರಾಗದಂತೆ ನಿರ್ವಹಣೆ ಅಥವಾ ಲಸಿಕೆ ಬಗ್ಗೆಗಿನ ತಪ್ಪು ಕಲ್ಪನೆಗಳ ಹೊರತಾಗಿಯೂ ಅದರ ಸುರಕ್ಷತೆ, ದಕ್ಷತೆ ಸುತ್ತಲಿನ ಆತಂಕ ಎದ್ದಿರುವುದರಿಂದ ಜನರಲ್ಲಿನ ಹಿಂಜರಿಕೆಯನ್ನು ತೊಡೆದುಹಾಕುವುದು ಈ ಕಾರ್ಯತಂತ್ರದ ಗುರಿಯಾಗಿದೆ ಎಂದು ಹೇಳಲಾಗಿದೆ.ಲಸಿಕೆ ಪರಿಚಯ ಮತ್ತು ವಿತರಣೆ ಸಂದರ್ಭದಲ್ಲಿ ಸಂಭವನೀಯ ಅಪಾಯಗಳ ಬಗ್ಗೆ ಮಾಹಿತಿಯನ್ನು ಒದಗಿಸುವುದು ಮತ್ತು ಅನಪೇಕ್ಷಿತ ಬಿಕ್ಕಟ್ಟನ್ನು ತಗ್ಗಿಸುವುದು ಇದರ ಉದ್ದೇಶವಾಗಿದೆ. ಪಾರದರ್ಶಕ ಸಂವಹನದಿಂದ ಎಲ್ಲಾ ಜನರಲ್ಲಿ ಕೋವಿಡ್-19 ಲಸಿಕೆ ಬಗ್ಗೆ ನಂಬಿಕೆ ಮತ್ತು ವಿಶ್ವಾಸಾರ್ಹತೆ ಹೆಚ್ಚಿಸುವುದು ಎದುರು ನೋಡಲಾಗುತ್ತಿದೆ.ಮೂರು ವಿಧಾನಗಳ ಮೂಲಕ ಈ ಗುರಿಗಳ ಸಾಧನೆ ಆರೋಗ್ಯ ಸಚಿವಾಲಯದ ಉದ್ದೇಶವಾಗಿದೆ. ಮೊದಲನೇಯದಾಗಿ ಸಾಮಾಜಿಕ ಪ್ರಭಾವ ಅಥವಾ ತಜ್ಞರಿಂದ ಅನುಮೋದನೆ ಮತ್ತು ಲಸಿಕೆ ಸುರಕ್ಷತೆ, ದಕ್ಷಣೆ, ಹಂತ ಹಂತ ರೀತಿಯಲ್ಲಿ ವಿತರಣೆ ಕಾರ್ಯದ ಬಗ್ಗೆ ಅಧಿಕಾರಿಗಳ ಧ್ವನಿ ಮೂಲಕ ವಿವರಣೆ ಒದಗಿಸಲಾಗುತ್ತಿದೆ. ಎರಡನೇಯದಾಗಿ ಸೂಕ್ತ ಸಂದರ್ಭದಲ್ಲಿ ಪ್ರತಿಕ್ರಿಯೆ ಮತ್ತು ಮಾಧ್ಯಮ ನಿರ್ವಹಣೆ ಮೂಲಕ ಸನ್ನದ್ದತೆಯನ್ನು ಖಚಿತಪಡಿಸಿಕೊಳ್ಳಲು ರಾಷ್ಟ್ರೀಯ ಮಾಧ್ಯಮ ಕಾರ್ಯಪಡೆ ಘಟಕ ಸ್ಛಾಪನೆಗೆ ಉದ್ದೇಶವನ್ನು ಹೊಂದಲಾಗಿದೆ.
ಮೂರನೇಯದಾಗಿ ಸಮುದಾಯ ಸಮಾಲೋಚಕರು, ಧಾರ್ಮಿಕ ಮುಖಂಡರು, ಧಾರ್ಮಿಕ ಸಭೆ, ಯುವ ಜನಾಂಗ, ನಾಗರಿಕ ಸಂಘ ಸಂಸ್ಥೆಗಳು, ಸ್ವ ಸಹಾಯ ಗುಂಪುಗಳು, ಪಂಚಾಯತ್ ಮತ್ತಿತರ ಸಮುದಾಯ ಆಧಾರಿತ ವೇದಿಕೆಗಳೊಂದಿಗೆ ಮುಂಚೂಣಿ ಕಾರ್ಯಕರ್ತರನ್ನು ತೊಡಗಿಸಿಕೊಂಡು ಇದನ್ನು ಸಾಧಿಸುವುದಾಗಿದೆ.
ಕೋವಿಡ್ ಲಸಿಕೆ ಬಗ್ಗೆ ಮಾಹಿತಿ ನೀಡುವುದು, ಹಿಂಜರಿಕೆ ಹೋಗಲಾಡಿಸುವುದು, ಸೂಕ್ತ ನಡವಳಿಕೆಯೊಂದಿಗೆ ವಸಿಕೆ ಬಗ್ಗೆ ಆಸಕ್ತಿಯನ್ನು ಹೆಚ್ಚಿಸುವುದು ನಾಲ್ಕನೇ ಪ್ರಮುಖವಾದ ಕ್ಷೇತ್ರವಾಗಿದೆ. ಒಂದು ವೇಳೆ ಯಾವುದೇ ಅಡ್ಡಪರಿಣಾಮ ಉಂಟಾದಲ್ಲಿ, ಆರೋಗ್ಯ ಕಾರ್ಯಕರ್ತರ ವಿರುದ್ದದ ಆಕ್ರಮಣಕಾರಿ ನಡೆಯನ್ನು ತಡೆದು ಸಮುದಾಯವನ್ನು ಶಾಂತವಾಗಿ ಇರುವಂತೆ ಪರಿಸ್ಥಿತಿಯನ್ನು ನಿಭಾಯಿಸಬೇಕಾಗುತ್ತದೆ.