ಹೊಸದಿಲ್ಲಿ: ತೈಲೋತ್ಪನ್ನಗಳ ಬೆಲೆ ಗಗನಮುಖಿಯಾಗಿದ್ದು, ಜನರ ಜೇಬು ಸುಡುತ್ತಿದೆ. ಪ್ರತೀ ಲೀಟರ್ ಪೆಟ್ರೋಲ್ ಬೆಲೆ ಶನಿವಾರ ಎರಡು ವರ್ಷಗಳಲ್ಲೇ ಗರಿಷ್ಠ ಮಟ್ಟಕ್ಕೆ ತಲುಪಿದೆ. ಪ್ರತೀ ಲೀಟರ್‌ಗೆ 28 ಪೈಸೆ ಏರಿಕೆಯಾಗಿದ್ದು, ಬೆಂಗಳೂರಿನಲ್ಲಿ 85.91 ರೂ. ಮುಟ್ಟಿತ್ತು. ಹಾಗೆಯೇ ಡೀಸೆಲ್ ಬೆಲೆ ಲೀ.ಗೆ 27 ಪೈಸೆಗಳಷ್ಟು ಏರಿ 77.73 ರೂ.ಗಳಿಗೆ ತಲುಪಿತ್ತು. ಜೂ. 5ರಂದು 73.55 ರೂ.ಗಳಷ್ಟಿದ್ದ ಪೆಟ್ರೋಲ್ ಬೆಲೆ ಬಳಿಕ ಏರುತ್ತ ಬಂದಿದೆ. ಡೀಸೆಲ್ ಬೆಲೆ ಜೂ. 5ರಂದು 65.96 ರೂ. ಇತ್ತು.
13ನೇ ಬಾರಿ ಏರಿಕೆ
2018ರ ಸೆಪ್ಟಂಬರ್‌ನಿಂದೀಚೆಗೆ ಪೆಟ್ರೋಲ್ ಮತ್ತು ಡೀಸೆಲ್‌ಗಳ ಅತ್ಯಧಿಕ ಬೆಲೆ ಇದಾಗಿದೆ. ನವೆಂಬರ್‌ನಿಂದೀಚೆಗೆ ಇದು 13ನೇ ಬಾರಿಯ ಬೆಲೆಯೇರಿಕೆ. ಕಳೆದ 16 ದಿನಗಳಲ್ಲಿ ಪೆಟ್ರೋಲ್ ಬೆಲೆ ಲೀ.ಗೆ 2.07 ರೂ. ಏರಿದ್ದರೆ, ಡೀಸೆಲ್ ಬೆಲೆ ಲೀ.ಗೆ 2.86 ರೂ. ಹೆಚ್ಚಿದೆ. ಪೆಟ್ರೋಲ್ ಬೆಲೆ ಸೆ.22ರಿಂದ ಮತ್ತು ಡೀಸೆಲ್ ಬೆಲೆ ಅ. 2ರಿಂದ ನ. 20ರ ತನಕ ಯಥಾಸ್ಥಿತಿಯಲ್ಲಿತ್ತು. ನ. 20ರಿಂದ ತೈಲ ಕಂಪೆನಿಗಳು ದೈನಿಕ ತೈಲ ಬೆಲೆ ಪರಿಷ್ಕರಣೆ ಆರಂಭಿಸಿದ ಬಳಿಕ ಸತತ ಬೆಲೆಯೇರಿಕೆ ದಾಖಲಾಗುತ್ತಿದೆ.