ನವದೆಹಲಿ: ಇತಿಹಾಸದ ಪುಟಕ್ಕೆ ಮತ್ತೊಂದು ವರ್ಷ ಸೇರ್ಪಡೆಯಾಗುತ್ತಿದ್ದು, 2020 ಏಕೈಕ ವಿಚಾರವಾಗಿ ವಿಶ್ವಾದ್ಯಂತ ಸುದ್ದಿಗೆ ಗ್ರಾಸವಾಗಿತ್ತು. ಈ ಹಿಂದೆ ಪ್ರಳಯದ ವಿಚಾರವಾಗಿ ಸುದ್ದಿ ಮಾಡಿದ್ದ 2020 ಪ್ರಳಯದ ಹೊರತಾಗಿ ಮತ್ತೊಂದು ರೀತಿಯ ವಿಕೋಪದಿಂದಾಗಿ ವ್ಯಾಪಕ ಸುದ್ದಿಗೆ ಗ್ರಾಸವಾಗಿತ್ತು. ಜನ ಸಾಮಾನ್ಯರು ಕಂಡು ಕೇಳರಿಯದ ಸಾಮಾಜಿಕ ಅಂತರ, ಕೊರೋನಾ ವೈರಸ್, ಐಸೋಲೇಷನ್, ಕ್ವಾರಂಟೈನ್ ನಂತಹ ಪದಗಳು ಇದೀಗ ಜನರ ಜೀವನದ ಪ್ರಮುಖ ಅಂಶಗಳಾಗಿ ಹೋಗಿವೆ.
ಈ ಹಿಂದೆ ವಿಜ್ಞಾನಕ್ಕೆ, ವಿಜ್ಞಾನಿಗಳಿಗೆ ಅಷ್ಟೊಂದು ಪ್ರಾಮುಖ್ಯತೆ ದೊರೆಯುತಿಲ್ಲ ಎಂದು ಅನೇಕ ತಜ್ಞರು ಅಭಿಪ್ರಾಯಪಟ್ಟಿದ್ದರು. ಆದರೆ 2020ರಲ್ಲಿ ಸಾಂಕ್ರಾಮಿಕ ರೋಗಶಾಸ್ತ್ರಜ್ಞರು, ರೋಗನಿರೋಧಕ ತಜ್ಞರು, ವೈದ್ಯರು, ವೈದ್ಯಕೀಯ ಸಿಬ್ಬಂದಿಗಳೇ ಬದಲಾವಣೆ ಹರಿಕಾರರಾದರು. ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕದಿಂದಾಗಿ ಇವರೆಲ್ಲರೂ ಜಾಗತಿಕ ಹೀರೋಗಳಾಗಿ ಬದಲಾದರು. ನೆಗಡಿ, ಶೀಥ ಎಂದರೆ ಅತೀವ ನಿರ್ಲಕ್ಷ್ಯ ತೋರುತ್ತಿದ್ದ ಜನ ಇಂದು ನೆಗಡಿ, ಶೀಥ ಎಂದರೆ ಆಸ್ಪತ್ರೆಗೆ ಧಾವಿಸುವಷ್ಟರ ಮಟ್ಟಿಗೆ ಎಚ್ಚರಿಕೆ ವಹಿಸುತ್ತಿದ್ದಾರೆ. ಕೋವಿಡ್ 19 ಮಾರಕ ಸೊಂಕು 2020ರಲ್ಲಿ ಜನರಿಗೆ ಸಾಮೂಹಿಕ ಕಲಿಕಾ ಅನುಭವವಾಗಿತ್ತು ಎಂದರೆ ತಪ್ಪಾಗಲಾರದು. ರೋಗ, ವಿಜ್ಞಾನ, ವಿಜ್ಞಾನಿ, ಲಸಿಕೆ, ವೈದ್ಯಕೀಯ ಸಿಬ್ಬಂದಿ, ವೈದ್ಯರ ಕುರಿತಾದ ಹೆಚ್ಚೆಚ್ಚು ಮಾಹಿತಿಗಳನ್ನು ಜನ 2020ರಲ್ಲಿ ಕೊರೋನಾ ಕಾರಣದಿಂದಾಗಿ ಸಂಗ್ರಹಿಸಲು ಆರಂಭಿಸಿದ್ದಾರೆ. ಇಡೀ ಜಗತ್ತೇ ಇದೀಗ ತೆರೆದ ಪ್ರಯೋಗಾಲಯವಾಗಿದ್ದು, ಜನ ತಮ್ಮನ್ನು ತಾವು ಸ್ವಯಂ ಪ್ರೇರಿತರಾಗಿ ಪ್ರಯೋಗಗಳಿಗೆ ಒಡ್ಡಿಕೊಳ್ಳುತ್ತಿದ್ದಾರೆ.
2020ರಲ್ಲಿ ಕೊವಿಡ್ ಸೋಂಕು ಕಲಿಸಿದ ಪದಗಳು!
ಕೊರೋನಾ ವೈರಸ್
ಕೊರೋನಾ ವೈರಸ್ ಸೋಂಕು ಸಾಮಾನ್ಯವಾಗಿ ನೆಗಡಿಯಂತೆ ಸಾಮಾನ್ಯವಾಗಿದೆ. ಆದರೆ ಕೊರೋನ ವೈರಸ್ ನ ಕೋವಿಡ್-19 ಆಗಿ ನಮ್ಮ ಶಬ್ದಕೋಶವನ್ನು ಬಲವಾಗಿ ಪ್ರವೇಶ ಮಾಡಿತು. ಭಾರತದಲ್ಲಿ ಕೋವಿಡ್-19 ಮೊದಲ ಪ್ರಕರಣ ಜನವರಿ ತಿಂಗಳ ಅಂತ್ಯದಲ್ಲಿ ಕೇರಳದ ತ್ರಿಶೂರ್‍ನಲ್ಲಿ ಪತ್ತೆಯಾಗಿತ್ತು. ಆದರೆ ಈ ವೈರಸ್ ಭಾರತಕ್ಕೆ ಪ್ರವೇಶ ಮಾಡುವ ಮುನ್ನವೇ ವಿಶ್ವದ ಹೆಚ್ಚಿನ ಭಾಗಗಳಲ್ಲಿ ಅದಾಗಲೇ ತನ್ನ ಕರಾಳತೆಯನ್ನು ತೋರಿಸಿತ್ತು. ಭಾರತದಲ್ಲಿ ಇದರ ಪ್ರಭಾವ ತಿಳಿಯಲು ಮತ್ತೆರಡು ತಿಂಗಳು ಬೇಕಾಯಿತು.
ಐಸೋಲೇಷನ್ (ಪ್ರತ್ಯೇಕತೆ) / ಕ್ವಾರಂಟೈನ್ (ಸಂಪರ್ಕತಡೆ)
ಪ್ರತ್ಯೇಕತೆ ಎಂಬ ಪದವು ಸಾಮಾನ್ಯವಾಗಿ ಜನರ ಬಳಕೆಯಲ್ಲಿರಲಿಲ್ಲ. ಆದರೆ ಕೊರೋನಾ ವೈರಸ್ ಸೋಂಕು ಹರಡುವಿಕೆ ಅಥವಾ ಪ್ರಸರಣ ತಪ್ಪಿಸಲು ಸೋಂಕಿತ ವ್ಯಕ್ತಿಯನ್ನು ಆಥನ ಚಿಕಿತ್ಸಾವಧಿಯಲ್ಲಿ ಪ್ರತ್ಯೇಕವಾಗಿರಿಸಲೇ ಬೇಕಾಯಿತು. ಈ ಪ್ರಕ್ರಿಯೆ ಹಲವರಲ್ಲಿ ಭೀತಿ ಸೃಷ್ಟಿಸಿತ್ತು. ಅಂತೆಯೇ 125 ಕೋಟಿಗೂ ಅಧಿಕ ಜನರಿರುವ ಈ ದೇಶದಲ್ಲಿ ಕ್ವಾರಂಟೈನ್ ಅಥವಾ ಸಂಪರ್ಕತಡೆ ಪರಿಕಲ್ಪನೆಯು ಹೊಸದಾಗಿತ್ತು. ಆದರೆ ಮೇ ವೇಳೆಗೆ, ಅಂತರ್ ರಾಜ್ಯ ಪ್ರಯಾಣದ ನಿಬರ್ಂಧವಾದ ಬಳಿಕ ವೈರಸ್ ಮಾರಕತೆ ಮತ್ತು ಪ್ರಸರಣತೆಯ ತೀವ್ರತೆ ಜನರ ಅರಿವಿಗೆ ಬಂತು.
ರೋಗಲಕ್ಷಣ ರಹಿತ/ರೋಗಲಕ್ಷಣ ಸಹಿತ
ಕೊರೋನಾ ಸೋಂಕು ಇರುವಿಕೆ ಪತ್ತೆಗೆ ರೋಗಲಕ್ಷಣಗಳು ಇರಲೇಬೇಕು ಎಂಬ ಕಲ್ಪನೆ ಆರಂಭದಲ್ಲಿ ಸಾಮಾನ್ಯವಾಗಿತ್ತು. ಆದರೆ ರೋಗ ಲಕ್ಷಣರಹಿತವಾಗಿದ್ದರೂ ಮನುಷ್ಯನ ದೇಹದಿಂದ ಕೊರೋನಾ ಸೋಂಕು ಪ್ರಸರಣ ಸಾಧ್ಯ ಎಂಬುದು ಬಳಿಕ ಬಹಿರಂಗವಾಗಿತ್ತು. ಬಹುಪಾಲು ಜನರಲ್ಲಿ ಸೋಂಕು ಶೀತ ಮತ್ತು ಜ್ವರದಂತಹ ಚಿಹ್ನೆಗಳನ್ನು ತೋರಿಸಿದರೆ, ಕೆಲವರಲ್ಲಿ ಯಾವುದೇ ರೋಗಲಕ್ಷಣಗಳು ಗೋಚರಿಸುತ್ತಿರಲಿಲ್ಲ. ಆದರೂ ಅವರಲ್ಲಿ ಸೋಂಕು ದೃಢವಾಗುತ್ತಿದ್ದುದು ಜನರ ಮತ್ತಷ್ಟು ಭೀತಿಗೆ ಕಾರಣವಾಗಿತ್ತು.
ಮಾಸ್ಕ್
ಈ ಹಿಂದೆ ಆಸ್ಪತ್ರೆಗಳಲ್ಲಿ ಮಾತ್ರ ವೈದ್ಯಕೀಯ ಸಿಬ್ಬಂದಿಗಳು ಮಾಸ್ಕ್ ಧರಿಸುತ್ತಿದ್ದರು. ಆದರೆ ಕೊರೋನಾ ವೈರಸ್ ನಿಂದಾಗಿ ಮಾಸ್ಕ್ ಹಲವರ ಜೀವನದ ಅವಿಭಾಜ್ಯ ಅಂಗವಾಗಿ ಹೋಗಿದೆ. ಮಾರಕ ಕೊರೋನಾ ವೈರಸ್ ಸೋಂಕು ತಡೆಯುವಲ್ಲಿ ಮಾಸ್ಕ್ ಧರಿಸುವುದು ಅತ್ಯಂತ ಪರಿಣಾಮಕಾರಿ. ವೈರಸ್ ಸೋಂಕಿತನಿಂದ ಬರುವ ಡ್ರಾಪ್ ಲೆಟ್ಸ್ ಗಳು ಮತ್ತೊಬ್ಬರ ಪ್ರವೇಶ ಮಾಡದಂತೆ ಮಾಸ್ಕ್ ಗಳು ತಡೆಯುತ್ತವೆ. ಇದರಿಂದ ಸೋಂಕು ಪ್ರಸರಣ ಬಹುಪಾಲು ತಡೆದಂತಾಗುತ್ತದೆ. ಇದೇ ಕಾರಣಕ್ಕೆ ಮಾಸ್ಕ್ ಧರಿಸುವುದನ್ನು ಸರ್ಕಾರಗಳೇ ಕಡ್ಡಾಯ ಮಾಡಿವೆ. ಭೀತಿಯ ಸಂಗತಿ ಎಂದರೆ ಈಗಲೂ ಬಹುಪಾಲು ಮಂದಿ ಮಾಸ್ಕ್ ಗಳನ್ನು ಧರಿಸದೇ ನಿರ್ಭೀತಿಯಿಂದ ಓಡಾಡುತ್ತಿದ್ದಾರೆ. ಕನಿಷ್ಠ ಪಕ್ಷ ಇನ್ನು ಮುಂದೆಯಾದರೂ ದಯವಿಟ್ಟು ಮಾಸ್ಕ್ ಧರಿಸಿ.....
ಎನ್ 95 ಮಾಸ್ಕ್, ಪಿಪಿಇ ಕಿಟ್ ಗಳು
ಕೊರೋನಾ ವೈರಸ್ ಸೋಂಕು ತಡೆಯುವ ಪ್ರಕ್ರಿಯೆಯಲ್ಲಿ ಎನ್ 95 ಮಾಸ್ಕ್, ಪಿಪಿಇ ಕಿಟ್ ಗಳು ಪರಿಣಾಮಕಾರಿ. ದೇಶದಲ್ಲಿ ಸೋಂಕು ತೀವ್ರ ಗತಿಯಲ್ಲಿ ಪ್ರಸರಣವಾದ ಬೆನ್ನಲ್ಲೇ ದೇಶದಲ್ಲಿ ಎನ್ 95 ಮಾಸ್ಕ್, ಪಿಪಿಇ ಕಿಟ್ ಗಳ ಬಳಕೆ ವ್ಯಾಪಕವಾಯಿತು. ಅಪರೂಪದ ಬಳಕೆಯ ವಸ್ತುಗಳಾಗಿದ್ದ ಎನ್ 95 ಮಾಸ್ಕ್ ಮತ್ತು ಪಿಪಿಇ ಕಿಟ್ ಗಳು ಇಂದು ದೈನಂದಿನ ಬಳಕೆಯ ವಸ್ತುಗಳಾಗಿವೆ. ಈ ಹಿಂದೆ ಬಟ್ಟೆ ನೇಯುತ್ತಿದ್ದ ಗಾಮೆರ್ಂಟ್ ಗಳು ಇಂದು ಪಿಪಿಇ ಕಿಟ್ ಗಳನ್ನು ತಯಾರಿಸುವ ಘಟಕಗಳಾಗಿ ಮಾರ್ಪಟ್ಟಿವೆ. ಕೊರೋನಾ ವೈರಸ್ ಸೋಂಕಿನಿಂದಾಗಿ ಸ್ಥಗಿತವಾಗಿದ್ದ ವಿಮಾನ ಸೇವೆ, ಪಿಪಿಇ ಕಿಟ್ ಗಳನ್ನು ಪ್ರಯಾಣಿಕರು ಧರಿಸಿ ಪ್ರಯಾಣಿಸುವ ಮೂಲಕ ಮತ್ತೆ ಆರಂಭವಾಗಿತ್ತು. ಇದೂ ಕೂಡ 2020 ಪ್ರಮುಖ ಬೆಳವಣಿಗೆಯಾಗಿದೆ.
ಆಂಟಿಬಾಡಿ ಅಥವಾ ಪ್ರತಿಕಾಯಗಳು
ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕ ಮನುಷ್ಯನ ದೇಹ ಮತ್ತು ಪ್ರತಿಕಾಯಗಳ ಸಂಬಂಧವನ್ನು ಬಿಚ್ಚಿಟ್ಟಿತು. ಈ ಹಿಂದೆ ಮನುಷ್ಯನ ಪ್ರತಿಕಾಯಗಳ ಪರೀಕ್ಷೆಯ ವರದಿಗಾಗಿ ದಿನಗಟ್ಟಲೆ ಕಾಯಬೇಕಿತ್ತು. ಆದರೆ ಕೊರೋನಾ ಸಾಂಕ್ರಾಮಿಕದಿಂದಾಗಿ ಕೇವಲ 20 ನಿಮಿಷಗಳ ಅವಧಿಯಲ್ಲೇ ???ಂಟಿಬಾಡಿ ಅಥವಾ ಪ್ರತಿಕಾಯ ಪರೀಕ್ಷಾ ವರದಿ ಕೈ ಸೇರುವಂತಾಗಿದೆ. ಅಂತೆಯೇ ಕೊರೋನಾ ಸಾಂಕ್ರಾಮಿಕ ಆರಂಭದಲ್ಲಿ ಕೋವಿಡ್ ಪರೀಕ್ಷಾ ವರದಿ ಕೈ ಸೇರಲು ದಿನಗಳು ಬೇಕಾಗಿತ್ತು. ಆದರೆ ಇಂದು ಕೆಲವೇ ಸೆಕೆಂಡ್ ಗಳ ಅಂತರದಲ್ಲಿ ವರದಿ ಸಿಗುತ್ತಿದೆ.
ಪ್ಲಾಸ್ಮಾ ಚಿಕಿತ್ಸೆ
ಆಸ್ಪತ್ರೆಗೆ ದಾಖಲಾದ ಕೋವಿಡ್-19 ಸೋಂಕಿತರು ಚೇತರಿಸಿಕೊಳ್ಳಲು ಪ್ಲಾಸ್ಮಾ ಚಿಕಿತ್ಸೆಯು ಸಹಾಯ ಮಾಡಿತ್ತು. ಒಂದು ರೀತಿಯಲ್ಲಿ ಪ್ಲಾಸ್ಮಾ ಥೆರಪಿಯನ್ನು ಪವಾಡದ ಚಿಕಿತ್ಸೆ ಎಂದು ಕೂಡ ಕರೆಯಲಾಗಿತ್ತು. ಆದರೆ ಆ ಬಳಿಕ ಈ ರೀತಿಯ ಚಿಕಿತ್ಸೆಯ ಪರಿಣಾಮಕಾರಿತ್ವದ ಬಗ್ಗೆ ಪ್ರಶ್ನೆಗಳು ಏಳಲಾರಂಭಿಸಿದವು. ಪ್ರಸ್ತುತ ಇದೇ ಪ್ಲಾಸ್ಮಾ ಥೆರಪಿಯೇ ಕೊರೋನಾ ವೈರಸ್ ರೂಪಾಂತರಕ್ಕೆ ಕಾರಣವಾಗಿರಬಹುದು ಎಂದು ಶಂಕೆ ಮತ್ತು ಪ್ರಶ್ನೆಗಳು ಏಳಲಾರಂಭಿಸಿವೆ.
ಹೈಡ್ರಾಕ್ಸಿಕ್ಲೋರೋಕ್ವಿನ್
ಈ ಹಿಂದೆ ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೂಚಿಸಿದ್ದ ಔಷಧ ಇದು. ಈ ಔಷಧಿಯನ್ನು ಹೆಚ್ಚಾಗಿ ಉತ್ಫಾದಿಸುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಅಗ್ರಗಣ್ಯ. ಕೊರೋನಾ ಸಾಂಕ್ರಾಮಿಕದ ಬಳಿಕ ಈ ಔಷಧಿಯ ಬೇಡಿಕೆ ಗಣನೀಯವಾಗಿ ಹೆಚ್ಚಳವಾಗಿತ್ತು. ಈ ಬೇಡಿಕೆ ಎಷ್ಟರ ಮಟ್ಟಿಗೆ ಇತ್ತು ಎಂದರೆ ಸದಾಕಾಲ ಭಾರತವನ್ನು ತನ್ನ ಮಿತ್ರ ರಾಷ್ಟ್ರ ಎಂದು ಹೇಳುವ ಅಮೆರಿಕವೇ ಭಾರತ ಈ ಔಷಧಿಯನ್ನು ಹೆಚ್ಚಾಗಿ ಅಮೆರಿಕಕ್ಕೆ ರವಾನೆ ಮಾಡದಿದ್ದರೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಅಮೆರಿಕ ಅಧ್ಯಕ್ಷರು ಎಚ್ಚರಿಕೆ ನೀಡುವಷ್ಟರ ಮಟ್ಟಿಗೆ ಈ ಔಷಧಿಗೆ ಬೇಡಿಕೆ ಹೆಚ್ಚಾಗಿತ್ತು. ಆದರೆ ಆ ಬಳಿಕ ನಡೆದ ಸಂಶೋಧನೆಗಳಲ್ಲಿ ಹೆಚ್ ಸಿಕ್ಯೂ ಕೋವಿಡ್ ಚಿಕಿತ್ಸೆಯಲ್ಲಿ ಪರಿಣಾಮಕಾರಿಯಲ್ಲ ಎಂಬುದು ಸಾಬೀತಾಗಿತ್ತು.
ಹರ್ಡ್ ಇಮ್ಯುನಿಟಿ (ಸಾಮೂಹಿಕ ಪ್ರತಿರಕ್ಷ)
ಕೊರೋನಾ ವೈರಸ್ ನಿಯಂತ್ರಣ ಲಸಿಕೆಯನ್ನು ಅಥವಾ ಹರ್ಡ್ ಇಮ್ಯುನಿಟಿಯನ್ನು ಅವಲಂಬಿಸಿದಿಯೇ ಎಂಬ ಪ್ರಶ್ನೆ ಕೇಳಿ ಬಂದಿತ್ತು. ಆ ಬಳಿಕ ಹಲವು ಸಂಸ್ಥೆಗಳು ಲಸಿಕೆ ತಯಾರಿಕೆಯಲ್ಲಿ ತೊಡಗಿ ಬಹುತೇಕ ಯಶಸ್ಸು ಕೂಡ ಸಾಧಿಸುತ್ತಿವೆ. ಆದರೆ ಈ ಹಂತದಲ್ಲಿ ಪತ್ತೆಯಾದ ಕೊರೋನಾ ವೈರಸ್ ರೂಪಾಂತರ ಮತ್ತದೇ ಪ್ರಶ್ನೆ ಏಳುವಂತೆ ಮಾಡಿದ್ದು, ಮತ್ತೆ ಹರ್ಡ್ ಇಮ್ಯುನಿಟಿ (ಸಾಮೂಹಿಕ ಪ್ರತಿರಕ್ಷ)ಯ ಕುರಿತು ಚಿಂತಿಸುವಂತೆ ಮಾಡಿದೆ. ಆದರೆ ಈ ಹರ್ಡ್ ಇಮ್ಯುನಿಟಿ ಪ್ರಸರಣವಾಗಲು ಜನಸಂಖ್ಯೆಯ ಗಮನಾರ್ಹ ಪ್ರಮಾಣ ವೈರಸ್ ಸೋಂಕಿಗೆ ತುತ್ತಾದಾಗ ಮಾತ್ರ ಸಾಧ್ಯವಾಗುತ್ತದೆ.
ಲಸಿಕೆ
ವೈದ್ಯಕೀಯ ಇತಿಹಾಸದಲ್ಲೇ ಒಂದು ಲಸಿಕೆಗಾಗಿ ಈ ಬಾರಿ ನಡೆದಷ್ಟು ಶೋಧ ಅಥವಾ ಸ್ಪರ್ಧೆ ಹಿಂದೆಂದೂ ನಡೆದೇ ಇಲ್ಲ ಎಂದು ಹೇಳಬಹುದು. ಒಂದೇ ಒಂದು ವೈರಸ್ ಇಡೀ ಜಗತ್ತಿನ ಜನರನ್ನು ಬೆಚ್ಚಿ ಬೀಳಿಸಿದ್ದ ಸಂದರ್ಭದಲ್ಲಿ ಲಸಿಕೆಗಾಗಿ ಹಾಹಾಕಾರ ಸೃಷ್ಟಿಯಾಗಿತ್ತು. ಈ ಹೊತ್ತಿನಲ್ಲೇ ಜಗತ್ತಿನ ಅಗ್ರಗಣ್ಯ ಔಷಧ ತಯಾರಿಕಾ ಸಂಸ್ಥೆಗಳು ಲಸಿಕೆಯ ಸಂಶೋಧನೆಗೆ ಮುಂದಾದವು. ಇಷ್ಟು ದಿನ ತಾವು ಕೈಗೆತ್ತಿಕೊಂಡಿದ್ದ ಎಲ್ಲ ಸಂಶೋಧನೆಗಳನ್ನೂ ಪಕ್ಕಕ್ಕಿಟ್ಟು ಕೊರೋನಾ ಲಸಿಕೆಗಾಗಿ ಮುಗಿಬಿದ್ದವು. ಪರಿಣಾಮ ಇಂದು ಹಲವಾರು ಸಂಸ್ಥೆಗಳು ಕೊರೋನಾ ಸೋಂಕಿಗೆ ಲಸಿಕೆ ತಯಾರಿಸುವತ್ತ ದಾಪುಗಾಲಿರಿಸಿದೆ. ಆದರೆ ಬ್ರಿಟನ್ ನಲ್ಲಿ ಪತ್ತೆಯಾಗಿರುವ ಹೊಸ ರೂಪಾಂತರಿತ ಕೊರೋನಾ ವೈರಸ್ ಈ ಲಸಿಕೆಯ ಸ್ಪರ್ಧೆ ಮೇಲೆ ಕರಿನೆರಳು ಬೀಳುವಂತೆ ಮಾಡಿದೆ.
ರೂಪಾಂತರ
ವರ್ಷಾಂತ್ಯತದಲ್ಲಿ ಕೇಳಿಬಂದ ಮತ್ತು ಕೊರೋನಾ ವೈರಸ್ ನಷ್ಟೇ ಹೆಚ್ಚು ಸುದ್ದಿಗೆ ಗ್ರಾಸವಾದ ಪದ ರೂಪಾಂತರ (ಮ್ಯುಟೇಷನ್).. ಕೊರೋನಾ ವೈರಸ್ ನ ರೂಪಾಂತರ ಸ್ವರೂಪ ಕೆಲ ದಿನಗಳ ಹಿಂದಷ್ಟೇ ಬ್ರಿಟನ್ ನಲ್ಲಿ ಪತ್ತೆಯಾಗಿದೆ. ಈ ರೂಪಾಂತರಿತ ವೈರಸ್ ಪ್ರಸರಣ ವೇಗ ಹಳೆಯ ವೈರಸ್ ಗಿಂತ ಶೇ.70ರಷ್ಟು ಅಧಿಕ ಎಂಬುದೇ ಇದೀಗ ಎಲ್ಲರನ್ನೂ ಬೆಚ್ಚಿ ಬೀಳಿಸುತ್ತಿರುವ ವಿಚಾರವಾಗಿದೆ. ಕೊರೋನಾ ವೈರಸ್ ಗಾಗಿ ಬಿಲಿಯನ್ ಗಟ್ಟಲೆ ವ್ಯಯ ಮಾಡಿರುವ ಔಷಧ ತಯಾರಿಕಾ ಸಂಸ್ಥೆಗಳಿಗೆ ಈ ರೂಪಾಂತರಿತ ವೈರಸ್ ಹೊಸ ತಲೆನೋವಾಗಿ ಪರಿಣಮಿಸಿದೆ.
ಸಾಂಕ್ರಾಮಿಕ
ಅದೃಶ್ಯ ವೈರಸ್ ವೊಂದು ಜಗತ್ತಿನಾಧ್ಯಂತ ಜನರನ್ನು ರೋಗಿಗಳಾನ್ನಾಗಿ ಮಾಡುತ್ತಿದೆ. ಕೊರೋನಾ ಸಾಂಕ್ರಾಮಿಕದಿಂದಾಗಿ ಸ್ಥಬ್ಧವಾಗಿದ್ದ ಜಗತ್ತು ಈಗಷ್ಟೇ ಸಾಮಾನ್ಯ ಜನ ಜೀವನದತ್ತ ಮರಳುತ್ತಿದೆ. ಆದರೆ ಇದೇ ಹೊತ್ತಿನಲ್ಲಿ SಂಖS-ಅoಗಿ-2 ಕೊರೋನಾ ವೈರಸ್ ನ ರೂಪಾಂತರ ಸ್ವರೂಪ ಮತ್ತೆ ಜಗತ್ತಿಗೆ ಸಾಂಕ್ರಾಮಿಕದ ದರ್ಶನ ಮಾಡಿಸುತ್ತದೆಯೇ ಎಂಬುದನ್ನು ನೋಡಬೇಕಿದೆ.
ಲಾಕ್ ಡೌನ್
ಇದು ನಿಜಕ್ಕೂ ವರ್ಷದ ಪದ ಎಂದು ಹೇಳಬಹುದು. ಏಕೆಂದರೆ ಮಾರಕ ಕೊರೋನಾ ಸಾಂಕ್ರಾಮಿಕ ತಡೆಗಾಗಿ ಸರ್ಕಾರಗಳಿಗೆ ಸಿಕ್ಕ ಬಹುದೊಡ್ಡ ಅಸ್ತ್ರ ಇದಾಗಿತ್ತು. ಚೀನಾ ಸರ್ಕಾರದಿಂದ ಆರಂಭವಾದ ಈ ಲಾಕ್ ಡೌನ್ ಆಸ್ತ್ರ ಭಾರತವೂ ಸೇರಿದಂತೆ ಬಳಿಕ ಜಗತ್ತಿನಾದ್ಯಂತ ವಿಸ್ತರಣೆಯಾಗಿತ್ತು.
ಸಾಮಾಜಿಕ ಅಂತರ ಪಾಲನೆ
ಕೊರೋನಾ ಸಾಂಕ್ರಾಮಿಕದಲ್ಲಿ ಪ್ರಚಲಿತವಾದ ಮತ್ತೊಂದು ಪದ ಎಂದರೆ ಸಾಮಾಜಿಕ ಅಂತರ ಪಾಲನೆ. ಸೋಂಕು ತಡೆ ಪ್ರಕ್ರಿಯೆಲ್ಲಿ ಮತ್ತೊಂದು ಪ್ರಮುಖ ಕ್ರಮ ಇದು. ಸಾಮಾಜಿಕ ಅಂತರ ಪಾಲನೆ ಎಂದರೆ ಸಮಾಜದಿಂದ ದೂರ ಮಾಡುವುದು ಅಲ್ಲ. ಬದಲಿಗೆ ಪರಸ್ಪರ ದೈಹಿಕ ಅಂತರ ಕಾಪಾಡಿಕೊಳ್ಳುವುದು. ಇದರಿಂದ ಸೋಂಕು ಪ್ರಸರಣ ತಪ್ಪಿಸಬಹುದು. ವ್ಯಕ್ತಿಯ ಉಸಿರಾಟ, ಡ್ರಾಪ್ ಲೆಟ್ಸ್ ಗಳು ಮತ್ತೋರ್ವ ವ್ಯಕ್ತಿಯನ್ನು ತಲುಪುವುದನ್ನು ತಡೆಯುವ ನಿಟ್ಟಿನಲ್ಲಿ ಸಾಮಾಜಿಕ ಅಂತರ ಪಾಲನೆಯನ್ನು ಕಡ್ಡಾಯಗೊಳಿಸಲಾಗಿದೆ. ಆದರೆ ಇದರ ಪಾಲನೆ ಮತ್ತು ನಮ್ಮ ಸುರಕ್ಷತೆ ನಮ್ಮ ಕೈಯಲ್ಲೇ ಇದೆ.