ನವದೆಹಲಿ: 2021ರ ಗಣರಾಜ್ಯೋತ್ಸವ ದಿನಾಚರಣೆಗೆ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಮುಖ್ಯ ಅತಿಥಿಯಾಗಿ ಬರುವ ಸಾಧ್ಯತೆ ಇದೆ. ನವೆಂಬರ್ 27ರಂದು ನಡೆದಿರುವ ದೂರವಾಣಿ ಮಾತುಕತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬೋರಿಸ್ ಜಾನ್ಸನ್‌ರನ್ನು ಆಹ್ವಾನಿಸಿರುವುದಾಗಿ ವರದಿಯಾಗಿದೆ.
ಇಂಗ್ಲೆಂಡ್‌ನಲ್ಲಿ ಮುಂದಿನ ವರ್ಷ ನಡೆಯಲಿರುವ ಜಿ-7 ಶೃಂಗಸಭೆಗೆ ಪ್ರಧಾನಿ ಮೋದಿ ಅವರನ್ನು ಬೋರಿಸ್ ಆಹ್ವಾನಿಸಿದ್ದಾರೆ. ಭಾರತದ ಗಣರಾಜ್ಯೋತ್ಸವದ ಆಚರಣೆಯಲ್ಲಿ ಬೋರಿಸ್ ಮುಖ್ಯ ಅತಿಥಿಯಾಗಿ ಬರುವಂತೆ ಪ್ರಧಾನಿ ಮೋದಿ ಆಹ್ವಾನಿಸಿರುವುದು ತಿಳಿದು ಬಂದಿದೆ ಎಂದು ಹಿಂದುಸ್ತಾನ್ ಟೈಮ್ಸ್ ವರದಿ ಮಾಡಿದೆ.
1993ರಲ್ಲಿ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಮುಖ್ಯ ಅತಿಥಿಯಾಗಿ ಬ್ರಿಟನ್‌ನ ಜಾನ್ ಮೇಜರ್ ಭಾಗಿಯಾಗಿದ್ದರು. ಅನಂತರ ಇದೇ ಮೊದಲ ಬಾರಿಗೆ ಬ್ರಿಟನ್ ಪ್ರಧಾನಿಗೆ ಆಹ್ವಾನ ನೀಡಲಾಗಿದೆ.
ನವೆಂಬರ್ 27ರಂದು ಪ್ರಧಾನಿ ಮೋದಿ ಮಾಡಿದ್ದ ಟ್ವೀಟ್‌ನಲ್ಲಿ 'ಗೆಳೆಯ ಯುಕೆ ಪ್ರಧಾನಿ ಬೋರಿಸ್ ಜಾನ್ಸನ್ ಅವರೊಂದಿಗೆ ಭಾರತ-ಯುಕೆ ಬಾಂಧವ್ಯಕ್ಕೆ ಸಂಬಂಧಿಸಿದಂತೆ ಮುಂದಿನ ಯೋಜನೆಗಳ ಕುರಿತು ಅತ್ಯುತ್ತಮ ಮಾತುಕತೆ ನಡೆಯಿತು. ವ್ಯಾಪಾರ ಮತ್ತು ಹೂಡಿಕೆ, ರಕ್ಷಣೆ ಮತ್ತು ಭದ್ರತೆ, ಹಾವಾಮಾನ ಬದಲಾವಣೆ ಹಾಗೂ ಕೋವಿಡ್-19 ಹೋರಾಟಗಳು ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ಸಹಕಾರ ನೀಡಲು ಸಮ್ಮತಿಸಿದೆವು' ಎಂದಿದ್ದರು.