ನವದೆಹಲಿ: ನೀವು ನಿಮ್ಮ ಬ್ಯಾಂಕ್ ಗೆ ದೂರು ಸಲ್ಲಿಸಿದ್ದರೂ ಬ್ಯಾಂಕ್ ನಿಮ್ಮ ಕುಂದುಕೊರತೆಯನ್ನು ಪರಿಹರಿಸಲು ವಿಫಲವಾಗಿದೆಯೆ? ಹಾಗಿದ್ದರೆ ಇನ್ನು ಈ ಬಗೆಯ ನಿರ್ಲಕ್ಷಕ್ಕೆ ಬ್ಯಾಂಕ್ ಸರಿಯಾದ ಬೆಲೆ ತೆರಬೇಕಾಗುತ್ತದೆ. ಜನವರಿ 2021 ರಿಂದ, ಇದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‍ಬಿಐ) ಜಾರಿಗೆ ತರಲಿರುವ ಹೊಸ ನಿಯಮಗಳಂತೆ ಗ್ರಾಹಕರ ದೂರುಗಳನ್ನು ಬಗೆಹರಿಸುವಲ್ಲಿ ಬ್ಯಾಂಕಿನ ಆಡಳಿತ ವಿಫಲವಾದರೆ ಅದಕ್ಕೆ ತಕ್ಕ ದಂಡವನ್ನು ಬ್ಯಾಂಕ್ ಪಾವತಿಸಬೇಕಾಗುತ್ತದೆ.
"ಬ್ಯಾಂಕ್ ಗ್ರಾಹಕರ ದೂರುಗಳ ಬಗ್ಗೆಸಮಗ್ರವಾದ ನಿಯಮಾವಳಿ ರೂಪಿಸಲು ನಿರ್ಧರಿಸಲಾಗಿದೆ. ಪರಿಹರಿಸಬಹುದಾದ ದೂರುಗಳು ತುಲನಾತ್ಮಕವಾಗಿ ಅಧಿಕವಾಗಿದ್ದಾಗ ಬ್ಯಾಂಕುಗಳಿಂದ ದೂರುಗಳ ಪರಿಹಾರದ ವೆಚ್ಚವನ್ನು ಮರುಪಡೆಯುವ ರೂಪದಲ್ಲಿ ವಿತ್ತೀಯ ಕುಂದುಕೊರತೆ ನಿವಾರಣಾ ಕಾರ್ಯವಿಧಾನದ ಮೂಲಕ ಹಾಗೂ ಸಮಯಕ್ಕೆ ತಕ್ಕಂತೆ ತಮ್ಮ ಪರಿಹಾರ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಫಲವಾದ ಬ್ಯಾಂಕುಗಳ ವಿರುದ್ಧ ಮೇಲ್ವಿಚಾರಣಾ ಕ್ರಮ ತೆಗೆದುಕೊಳ್ಳಲಾಗುತ್ತದೆ"ಆರ್‍ಬಿಐ ಕಳೆದ ವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.
ಈ ನಿಯಮಾವಳಿಯನ್ನು ಜನವರಿ 2021 ರಲ್ಲಿಜಾರಿಗೆ ತರಲಾಗುವುದು ಎಂದು ಕೇಂದ್ರ ಬ್ಯಾಂಕ್ ಹೇಳಿದೆ. ಸಾಮಾನ್ಯವಾಗಿ, ಬ್ಯಾಂಕುಗಳು ತಮ್ಮದೇ ಆದ ಆಂತರಿಕ ಗ್ರಾಹಕ ದೂರುಗಳ ಪರಿಹಾರ ಕಾರ್ಯವಿಧಾನಗಳನ್ನು ಹೊಂದಿರುತ್ತದೆ. ನಿಗದಿತ ಅವಧಿಯೊಳಗೆ ದೂರಿನ ಬಗೆಗೆ ಕೆಲಸ ಮಾಡಲು ಬ್ಯಾಂಕ್ ವಿಫಲವಾದರೆ, ಆರ್‍ಬಿಐನ ಬ್ಯಾಂಕಿಂಗ್ ಒಂಬುಡ್ಸ್ಮನ್‍ನನ್ನು ಸಂಪರ್ಕಿಸುವ ಹಕ್ಕನ್ನು ಗ್ರಾಹಕರು ಹೊಂದಿದ್ದಾರೆ, ಅವರು ದೂರನ್ನು ಪರಿಹರಿಸುತ್ತಾರೆ.
ಆರ್‍ಬಿಐ ಪ್ರಕಾರ ಒಂಬುಡ್ಸ್ಮನ್ ಈ ದೂರುಗಳ ಪರಿಹಾರದಿಂದ ಉಂಟಾಗುವ ವೆಚ್ಚಗಳ ಚೇತರಿಕೆಗಾಗಿ ಬ್ಯಾಂಕುಗಳಲ್ಲಿನ ಹೊಸ ವಿತ್ತೀಯ ನಿಯಮಗಳಿರಲಿದೆ. ಲಭ್ಯವಿರುವ ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಬ್ಯಾಂಕಿಂಗ್ ಓಂಬುಡ್ಸ್ಮನ್ ಕಚೇರಿಗಳು ದೂರನ್ನು ನಿಭಾಯಿಸುವ ಸರಾಸರಿ ವೆಚ್ಚವು 2018-19ರಲ್ಲಿ 3,145 ರೂ. ಆಗಿದೆ. ಭಾರತೀಯ ಬ್ಯಾಂಕಿಂಗ್‍ನ ಆಂತರಿಕ ಕುಂದುಕೊರತೆ ನಿವಾರಣಾ ಕಾರ್ಯವಿಧಾನದ ಪರಿಣಾಮಕಾರಿತ್ವವನ್ನು ಸುಧಾರಿಸಲು ಮತ್ತು ಉತ್ತಮ ಗ್ರಾಹಕ ಸೇವೆಯನ್ನು ಒದಗಿಸಲು ಈ ಕ್ರಮವನ್ನು ಪ್ರಾರಂಭಿಸಲಾಗಿದೆ ಎಂದು ಕೇಂದ್ರ ಬ್ಯಾಂಕ್ ಹೇಳಿದೆ.
ಬ್ಯಾಂಕಿಂಗ್ ಒಂಬುಡ್ಸ್ಮನ್ ಯೋಜನೆ (ಬಿಒಎಸ್) ಅನ್ನು ಮೊದಲು 1995 ರಲ್ಲಿ ಆರ್‍ಬಿಐ ಪ್ರಾರಂಭಿಸಿತ್ತು. ಪರಿಶಿಷ್ಟ ವಾಣಿಜ್ಯ ಬ್ಯಾಂಕುಗಳು, ಪರಿಶಿಷ್ಟ ಪ್ರಾಥಮಿಕ ನಗರ ಸಹಕಾರಿ ಬ್ಯಾಂಕುಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು, ಸಣ್ಣ ಹಣಕಾಸು ಬ್ಯಾಂಕುಗಳು ಮತ್ತು ದೇಶಾದ್ಯಂತ 21 ಕಚೇರಿಗಳ ಮೂಲಕ ನಿರ್ವಹಿಸುವ ಪಾವತಿ ಬ್ಯಾಂಕುಗಳನ್ನು ಇದು ಒಳಗೊಂಡಿದೆ. 2018-19ರ ಅವಧಿಯಲ್ಲಿ ಕಚೇರಿಗಳಿಗೆ ಒಟ್ಟು 1,95,901 ದೂರುಗಳು ಬಂದಿದ್ದು, ಇದು ಆ ಹಿಂದಿನ ವರ್ಷಕ್ಕಿಂತ ಶೇ 19.75 ರಷ್ಟು ಹೆಚ್ಚಾಗಿದೆ. ಇದರಲ್ಲಿ ವಿಲೇವಾರಿಯಾದ ದೂರುಗಳ ಪ್ರಮಾಣ ಶೇಕಡಾ 94.03 ರಷ್ಟಿದೆ.