ನವದೆಹಲಿ: ಗುರು ಮತ್ತು ಶನಿಗ್ರಹಗಳು ಅಕ್ಕಪಕ್ಕದಲ್ಲಿ ಇರುವಂತೆ ಕಾಣುವ ಅದ್ಭುತ ದೃಶ್ಯ ಡಿ. 21ರಂದು ನಭೋಮಂಡಲದಲ್ಲಿ ಗೋಚರಿಸಲಿದ್ದು, ಅದನ್ನು ಕಣ್ತುಂಬಿಕೊಳ್ಳಲು ಖಗೋಳಾಸಕ್ತರು ಸಜ್ಜಾಗಿದ್ದಾರೆ.
ಇದು 400 ವರ್ಷಗಳಿಗೊಮ್ಮೆ ಸಂಭವಿಸುತ್ತದೆ. ಈ ಎರಡೂ ಬೃಹತ್ ಗ್ರಹಗಳು ಸಮೀಪಕ್ಕೆ ಬಂದಿರುವುದನ್ನು ಭೂಮಿಯಿಂದ ಬರಿಗಣ್ಣಿನಿಂದ ನೋಡಲು ಡಿ. 21ರಂದು ಸಾಧ್ಯವಾಗಲಿದೆ. ಅದಲ್ಲದೆ ಟೆಲಿಸ್ಕೋಪ್, ಬೈನಾಕ್ಯುಲರ್‌ನಿಂದ ನೋಡಿದರೆ ಇನ್ನಷ್ಟು ಸ್ಪಷ್ಟವಾಗಿ ಈ ಗ್ರಹಗಳ ಸಾಮೀಪ್ಯ ಗೋಚರಿಸಲಿದೆ.
ಅಂದು ಭೂಮಿ, ಗುರು ಮತ್ತು ಶನಿಗ್ರಹಗಳು ಒಂದೇ ನೇರದಲ್ಲಿ ಕಂಡು ಬರುತ್ತಿರುವುದು ಈ ಅಪರೂಪದ ಖಗೋಳ ಘಟನೆಗೆ ಕಾರಣ. ಪ್ರತಿ ಇಪ್ಪತ್ತು ವರ್ಷಗಳಿಗೆ ಒಮ್ಮೆ ಇವು ಸಮೀಪಕ್ಕೆ ಬರುತ್ತವಾದರೂ ಇಷ್ಟೊಂದು ಸಮೀಪಕ್ಕೆ ಬರುವುದು 400 ವರ್ಷಗಳಿಗೊಮ್ಮೆ ಮಾತ್ರ. ಈ ಹಿಂದೆ 1226ರಲ್ಲಿ ಮತ್ತು 1623ರಲ್ಲಿ ಇವು ಇಷ್ಟು ಸನಿಹಕ್ಕೆ ಬಂದಿದ್ದವು ಎನ್ನುತ್ತಾರೆ ಖಗೋಳ ತಜ್ಞರು.
ಇದು ಒಂದು ದಿನ ಮಾತ್ರ ಗೋಚರಿಸುವಂತಹ ದೃಶ್ಯವಲ್ಲ. ಡಿಸೆಂಬರ್ ಅಂತ್ಯದವರೆಗೂ ಇದನ್ನು ಆಸಕ್ತರು ಕಣ್ತುಂಬಿಕೊಳ್ಳಬಹುದು. ಸಾಯಂಕಾಲದ ನಂತರ ನೈಋತ್ಯ ದಿಕ್ಕಿನಲ್ಲಿ ಇವು ಗೋಚರಿಸುತ್ತವೆ.