ನವದೆಹಲಿ: ಕೋವಿಡ್ ಹಿನ್ನೆಲೆಯಲ್ಲಿ ದೇಶದಲ್ಲಿ ನಿರುದ್ಯೋಗ ಸಮಸ್ಯೆ ನಿವಾರಿಸಿ ಹೊಸ ಉದ್ಯೋಗಗಳನ್ನು ಸೃಷ್ಟಿಸಲು ಇತ್ತೀಚೆಗೆ ಘೋಷಿಸಲಾಗಿದ್ದ 'ಆತ್ಮ ನಿರ್ಭರ ಭಾರತ್ ರೊಜ್ ಗಾರ್ ಯೋಜನೆ'ಗೆ ಕೇಂದ್ರ ಸರ್ಕಾರ ಹಣವನ್ನು ಹಂಚಿಕೆ ಮಾಡಿದೆ.
ಈ ಯೋಜನೆಯ ಅನುಷ್ಠಾನಕ್ಕೆ 22,810 ಕೋಟಿ ರೂ. ಹಂಚಿಕೆ ಮಾಡಲಾಗಿದೆ ಎಂದು ಪ್ರಕಟಿಸಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ 1,584 ಕೋಟಿ ರೂ. ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದೆ. ಈ ಸಂಬಂಧ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಂಪುಟ ಸಭೆಯ ನಿರ್ಧಾರಗಳನ್ನು ಕೇಂದ್ರ ಸಚಿವರಾದ ರವಿಶಂಕರ್ ಪ್ರಸಾದ್ ಹಾಗೂ ಸಂತೋಷ್ ಗಂಗ್ವಾರ್ ಮಾಧ್ಯಮಗಳಿಗೆ ವಿವರಿಸಿದರು.ಆತ್ಮನಿರ್ಭರ ಭಾರತ್ ರೋಜಗಾರ್ ಯೋಜನೆಯ ಭಾಗವಾಗಿ ಹೊಸದಾಗಿ ಉದ್ಯೋಗ ಕಲ್ಪಿಸುವ ಸಂಸ್ಥೆಗಳು, ಕೈಗಾರಿಕೆಗಳ ಪರವಾಗಿ ಉದ್ಯೋಗಿ, ಸಂಸ್ಥೆ ಪಾಲನ್ನು ಕೇಂದ್ರ ಸರ್ಕಾರ ಭರಿಸಲಿದೆ ಎಂದು ಸಂತೋಷ್ ಗಂಗ್ವಾರ್ ಹೇಳಿದರು.
ದೇಶಾದ್ಯಂತ ದೊಡ್ಡ ಪ್ರಮಾಣದಲ್ಲಿ ವೈ-ಫೈ ನೆಟ್ ವರ್ಕ್ ವಿಸ್ತರಿಸಲು ಪಿಎಂ ವಾಣಿ(ವೈಫೈ ಆಕ್ಸೆಸ್ ನೆಟ್ವರ್ಕ್ ಇಂಟರ್ಫೇಸ್) ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
ದೇಶದಲ್ಲಿ ವೈಫೈನಲ್ಲಿ ಕ್ರಾಂತಿ ತರಲು ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಇದರ ಭಾಗವಾಗಿ ಒಂದು ಕೋಟಿ ದತ್ತಾಂಶ ಕೇಂದ್ರಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ವೈಫೈಗಾಗಿ ಯಾವುದೇ ಪರವಾನಗಿ ಅಥವಾ ನೋಂದಣಿ ಇರುವುದಿಲ್ಲ ಎಂದು ಅವರು ಹೇಳಿದರು. ಇದಲ್ಲದೆ, ಸಮುದ್ರದೊಳಗಿನಿಂದ ಜಲಾಂತರ್ಗಾಮಿ ಆಪ್ಟಿಕಲ್ ಫೈಬರ್ ಕೇಬಲ್ ಮೂಲಕ ಲಕ್ಷದ್ವೀಪದಲ್ಲಿ ಹೈಸ್ಪೀಡ್ ಬ್ರಾಡ್ಬ್ಯಾಂಡ್ ಸೇವೆ ಒದಗಿಸುವ ಯೋಜನೆಗೆ ಸಂಪುಟ ಅನುಮೋದನೆ ನೀಡಿದ್ದು ಇದಕ್ಕಾಗಿ 1,072 ಕೋಟಿ ರೂ. ವೆಚ್ಚವಾಗಲಿದೆ ಎಂದರು.
ಆದೇ ರೀತಿ ಈಶಾನ್ಯ ರಾಜ್ಯ ಅರುಣಾಚಲ ಪ್ರದೇಶ ಹಾಗೂ ಅಸ್ಸಾಂನ ಎರಡು ಜಿಲ್ಲೆಗಳಲ್ಲಿ ವಿಸ್ತೃತ ಮೊಬೈಲ್ ವ್ಯಾಪ್ತಿಗಾಗಿ ಯುನಿವರ್ಸಲ್ ಸರ್ವಿಸ್ ಆಬ್ಲಿಗೇಶನ್ ಫಂಡ್(ಯುಎಸ್ ಒ ಎಫ್) ಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಯೋಜನೆಯ ಮೂಲಕ 2,374 ಗ್ರಾಮಗಳಿಗೆ ಮೊಬೈಲ್ ವ್ಯಾಪ್ತಿ ಲಭಿಸಲಿದೆ ಈ ಯೋಜನೆಯನ್ನು 2022 ರ ಡಿಸೆಂಬರ್ ವೇಳೆಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.