ಲಂಡನ್: ಬ್ರಿಟನ್ ನಲ್ಲಿ ಹೊಸ ಸ್ವರೂಪದ ಕೊರೋನಾ ವೈರಸ್ ಪತ್ತೆಯಾಗಿದ್ದು, ಹಳೆಯ ವೈರಸ್ ಗಿಂತ ಈ ಹೊಸ ವೈರಸ್ ಸೋಂಕು ಹರಡುವಿಕೆ ಪ್ರಮಾಣ ಶೇ.70ರಷ್ಟು ಹೆಚ್ಚಿದೆ ಎಂದು ವಿಜ್ಞಾನಿಗಳು ಕಳವಳ ವ್ಯಕ್ತಪಡಿಸಿದ್ದಾರೆ.
ಬ್ರಿಟನ್ ನಲ್ಲಿ ಈ ಹೊಸ ಸ್ವರೂಪದ ವೈರಸ್ ಪತ್ತೆಯಾಗಿದ್ದು, ಬ್ರಿಟನ್ ನಿಂದ ಇತರೆ ದೇಶಗಳಿಗೆ ಪ್ರಯಾಣಿಸಿದ್ದ ಪ್ರಯಾಣಿಕರಲ್ಲೂ ಈ ವೈರಸ್ ಪತ್ತೆಯಾಗಿದೆ. ಇದೇ ಕಾರಣಕ್ಕೆ ಯೂರೋಪಿನ ಇತರೆ ದೇಶಗಳು ಬ್ರಿಟನ್ ಗೆ ವಿಮಾನ ಪ್ರಯಾಣ ನಿಷೇಧಿಸಿದ್ದು, ಬ್ರಿಟನ್ ನಿಂದ ಬರುವ ವಿಮಾನಗಳಿಗೂ ನಿಷೇಧ ಹೇರಲಾಗಿದೆ.
ಬ್ರಿಟನ್ ನಲ್ಲಿ ಪತ್ತೆಯಾಗಿರುವ ಹೊಸ ಸ್ವರೂಪದ ಕೊರೋನಾ ವೈರಸ್ ಹಳೆಯ ವೈರಸ್ ಗಿಂತ ಹೆಚ್ಚು ಪ್ರಬಲ ವೈರಸ್ ಎಂದು ಹೇಳಲಾಗುತ್ತಿದ್ದು, ಹಳೆಯ ವೈರಸ್ ಗೆ ಹೋಲಿಕೆ ಮಾಡಿದರೆ ಇದರ ಸೋಂಕು ಹರಡುವಿಕೆ ವೇಗ ಶೇ.70ರಷ್ಟು ಹೆಚ್ಚು. ಕೋವಿಡ್ ಉಂಟುಮಾಡುವ ಕೊರೊನಾವೈರಸ್‌ನಿಂದಲೇ ಈ ಹೊಸ ಸ್ವರೂಪದ ವೈರಸ್ ಬೆಳವಣಿಗೆಯಾಗಿದೆ. ಮೂಲ ವೈರಸ್‌ಗೆ ಹೋಲಿಸಿದರೆ, ಇದರಲ್ಲಿ 23 ಬದಲಾವಣೆಗಳನ್ನು ವಿಜ್ಞಾನಿಗಳು ಗುರುತಿಸಿದ್ದಾರೆ.
ಮೂಲ ವೈರಸ್‌ಗಿಂತ ಇದು ಶೇ 70ರಷ್ಟು ಹೆಚ್ಚು ವೇಗವಾಗಿ ಹರಡುತ್ತದೆ. ಹೆಚ್ಚು ವೇಗವಾಗಿ ಮಾನವನ ದೇಹವನ್ನು ಹೊಕ್ಕುತ್ತದೆ. ಹೀಗಾಗಿಯೇ ಈ ವೈರಸ್ ಅನ್ನು ನಿಯಂತ್ರಿಸುವುದು ಅತ್ಯಗತ್ಯ. ಇಲ್ಲದಿದ್ದಲ್ಲಿ ವಿಶ್ವದಾದ್ಯಂತ ಪರಿಸ್ಥಿತಿ ಕೈಮೀರಿ ಹೋಗುವ ಅಪಾಯವಿದೆ ಎಂದು ವಿಜ್ಞಾನಿಗಳು ವಿವರಿಸಿದ್ದಾರೆ.
ಹೊಸ ವೈರಸ್ ಎಷ್ಟು ಪ್ರಬಲವೆಂದರೆ ದೇಹದಲ್ಲಿ ಕೋವಿಡ್ ಅನ್ನು ಉಂಟು ಮಾಡುವ ರೀತಿಯಲ್ಲಿಯೂ ಬದಲಾವಣೆ ಆಗಿದೆ. ಹೊಸ ವೈರಸ್ ಅನ್ನು ವಿಜ್ಞಾನಿಗಳು H69/V70 ಕೊರೋನಾ ವೈರಸ್ ಎಂದು ಕರೆದಿದ್ದಾರೆ. ಪ್ರಸ್ತುತ ಬ್ರಿಟನ್ ನಲ್ಲಿ ಹಾಲಿ ಪತ್ತೆಯಾಗುತ್ತಿರುವ ಸೋಂಕಿತರ ಪೈಕಿ ಶೇ.75ರಷ್ಟು ಸೋಂಕಿತರಲ್ಲಿ ಈ H69/V70 ಕೊರೋನಾ ವೈರಸ್ ಪತ್ತೆಯಾಗುತ್ತಿದೆ. ಅಕ್ಟೋಬರ್ 1ರಂದು ಈ ಸ್ವರೂಪದ ಮೊದಲ ಪ್ರಕರಣ ಪತ್ತೆಯಾಗಿತ್ತು. ಇಂದಿನಿಂದ ಕ್ರಮೇಣ ಈ ವೈರಸ್ ಸ್ವರೂಪದ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ.
ಹಾಲಿ ಲಸಿಕೆಗಳೂ ಕೂಡ ಕೆಲಸ ಮಾಡುವುದಿಲ್ಲ?:
ಹೊಸ ಸ್ವರೂಪದ ಕೊರೋನಾ ವೈರಸ್ ನ ಮಾರಣಾಂತಿಕತೆ ಕುರಿತು ಮಾತನಾಡಿರುವ ವಿಜ್ಞಾನಿಗಳು H69/V70 ವೈರಸ್ ಎಷ್ಟು ಪ್ರಬಲ ಮತ್ತು ಎಷ್ಟರ ಮಟ್ಟಿಗೆ ಮಾರಣಾಂತಿಕತೆ ಸೃಷ್ಟಿ ಮಾಡುತ್ತದೆ ಎಂಬುದನ್ನು ಈಗಲೇ ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಆದರೆ ಈ ಹಿಂದಿನ ಸ್ವರೂಪದ ವೈರಸ್ ಗಿಂತ ಹೆಚ್ಚಿನ ವೇಗದಲ್ಲಿ ಜೀವಕೋಶಗಳ ಮೇಲೆ ಪರಿಣಾಮ ಬೀರುತ್ತದೆ. ಈ ಹಿಂದಿನ ಸ್ವರೂಪದ ವೈರಸ್ ಮೇಲೆ ನಡೆದ ಸಂಶೋಧನೆ ಆಧಾರದ ಮೇಲೆ ಲಸಿಕೆಗಳ ಅಂತಿಮ ಹಂತದ ಪ್ರಯೋಗಗಳನ್ನು ನಡೆಯುತ್ತಿವೆ. ಆದರೆ ಹೊಸ ಸ್ವರೂಪದ ವೈರಸ್ ಮೇಲೆ ಈ ಲಸಿಕೆಗಳ ಪರಿಣಾಮಕಾರಿಯಾಗುತ್ತವೆಯೇ ಎಂಬುದನ್ನು ಸಂಶೋಧನೆ ಮೂಲಕವೇ ತಿಳಿದುಕೊಳ್ಳಬೇಕು. ಆದರೆ ಹೊಸ ಸ್ವರೂಪದ ವೈರಸ್ ಗಳ ಮೇಲೆ ಹಾಲಿ ಲಸಿಕೆಗಳು ಸಂಪೂರ್ಣವಾಗಿ ಅಲ್ಲದೇ ಇದ್ದರೂ ಬಹುತೇಕ ಕೆಲಸ ಮಾಡಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ.
ವೈರಸ್ ಸ್ವರೂಪ ಹೇಗೆ ಬದಲಾಗುತ್ತದೆ?:
ಸಾಮಾನ್ಯವಾಗಿ ಸೋಂಕಿತ ವ್ಯಕ್ತಿಯ ದೇಹ ವೈರಸ್ ವಿರುದ್ಧ ಹೋರಾಡಲು ವಿಫಲವಾದಾಗ ಅಥವಾ ಸೋಂಕಿತನ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕ್ಷೀಣಿಸಿದಾಗ, ವೈರಸ್ ಆ ದೇಹವನ್ನೇ ತನ್ನ ಸಂತಾನೋತ್ಪತ್ತಿ ಜಾಗವಾಗಿಸಿಕೊಳ್ಳುತ್ತದೆ. ಹೀಗೆ ಹಳೆಯ ವೈರಸ್ ನಿಂದ ಉತ್ಪತ್ತಿಯಾದ ಹೊಸ ವೈರಸ್ ನಲ್ಲಿ ಸಾಕಷ್ಟು ಬದಲಾವಣೆಗಳೂ ಕೂಡ ಇರುತ್ತವೆ, ಕೆಲವೊಮ್ಮೆ ಈ ಬದಲಾವಣೆಗಳೂ ಸಕಾರಾತ್ಮಕ ಅಥವಾ ನಕಾರಾತ್ಮಕವಾಗಿಯೂ ಇರಬಹುದು. ಅಂದರೆ ಹೊಸ ಸ್ವರೂಪದ ವೈರಸ್ ಹಳೆಯ ವೈರಸ್ ಗಿಂತ ಪ್ರಬಲ ಮತ್ತು ಮಾರಣಾಂತಿಕವಾಗೂ ಆಗಿರಬಹುದು ಅಥವಾ ದುರ್ಬಲವೂ ಆಗಿರಬಹುದು. ಇದನ್ನು ಸಂಶೋಧನೆಗಳ ಮೂಲಕವೇ ತಿಳಿದುಕೊಳ್ಳಬೇಕು ಎಂದು ವಿಜ್ಞಾನಿಗಳು ಹೇಳಿದ್ದಾರೆ.