ನವದೆಹಲಿ: ಪಿಎಂ ಕಿಸಾನ್ ಸಮ್ಮನ್ ಯೋಜನೆಯಡಿಯಲ್ಲಿ ರೈತರಿಗೆ ಕೇಂದ್ರ ಸರ್ಕಾರವು 6000 ರೂ. ಹಣವನ್ನು ಮೂರು ಕಂತುಗಳಲ್ಲಿ ನೀಡುತ್ತದೆ. ಈ ರೀತಿಯಾಗಿ ಪ್ರತಿ ಕಂತುಗಳಲ್ಲಿ ನೀಡುವ ಹಣವನ್ನು ಈ ಬಾರಿ ಸ್ವತಃ ಪ್ರಧಾನಿ ನರೇಂದ್ರ ಮೋದಿ ಜಮಾ ಮಾಡಲಿದ್ದು, ದಿನಾಂಕವನ್ನು ಘೋಷಿಸಿದ್ದಾರೆ.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದಂದು ಪ್ರಧಾನಿ ನರೇಂದ್ರ ಮೋದಿ ಅವರು ಏಳನೇ ಕಂತಿನ ಹಣವನ್ನು ದೇಶಾದ್ಯಂತ ಕೋಟ್ಯಾಂತರ ಫಲಾನುಭವಿ ರೈತರಿಗೆ ಬಿಡುಗಡೆ ಮಾಡಲಿದ್ದಾರೆ. ಏಳನೇ ಕಂತುಗಾಗಿ ಕಾಯುತ್ತಿರುವ ಕೋಟ್ಯಂತರ ರೈತರಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಡಿಸೆಂಬರ್ 25 ರಂದು ಪಿಎಂ ಮೋದಿ ಈ ಯೋಜನೆಯ ಆರ್ಥಿಕ ಲಾಭಗಳನ್ನು ನೀಡಲಿದ್ದಾರೆ.
ದೆಹಲಿ ಗಡಿಯಲ್ಲಿ ರೈತರ ಪ್ರತಿಭಟನೆಯು 30ನೇ ದಿನಕ್ಕೆ ಕಾಲಿಡುತ್ತಿದ್ದು, ಮತ್ತೊಂದೆಡೆ ರೈತರಿಗೆ ಹಣ ಜಮಾವಣೆಯಾಗುವುದಾಗಿ ಪ್ರಕಟಣೆಯಾಗಿದೆ. ಇದು ಪಿಎಂ ಕಿಸಾನ್ ಸಮ್ಮನ್ ನಿಧಿಯ ಏಳನೇ ಕಂತು ಆಗಿದ್ದು, ಈ ಹಿಂದೆ 12,000 ರೂಪಾಯಿಗಳನ್ನು 6 ಕಂತುಗಳ ರೂಪದಲ್ಲಿ ರೈತರ ಖಾತೆಗೆ ಕಳುಹಿಸಲಾಗಿದೆ.
ಪಿಎಂಒ ನೀಡಿದ ಮಾಹಿತಿಯ ಪ್ರಕಾರ, ಪ್ರಧಾನಿ ಕಿಸಾನ್ ಸಮ್ಮನ್ ನಿಧಿ ಯೋಜನೆಯಡಿ 9 ಕೋಟಿಗೂ ಹೆಚ್ಚು ರೈತರಿಗೆ ಕೇಂದ್ರ ಸರ್ಕಾರ 18,000 ಕೋಟಿ ರೂ. ಜಮಾ ಮಾಡಲಿದೆ. ಈ ಸಮಯದಲ್ಲಿ ಪ್ರಧಾನಿ ಮೋದಿ 6 ರಾಜ್ಯಗಳ ರೈತರೊಂದಿಗೆ ಸಂವಹನ ನಡೆಸಲಿದ್ದಾರೆ. ರೈತ ಕಲ್ಯಾಣಕ್ಕಾಗಿ ಸರ್ಕಾರ ನಡೆಸುತ್ತಿರುವ ಇತರ ಯೋಜನೆಗಳ ಬಗ್ಗೆ ರೈತರು ತಮ್ಮ ಅನುಭವಗಳನ್ನು ಪ್ರಧಾನಿ ಮೋದಿ ಅವರೊಂದಿಗೆ ಹಂಚಿಕೊಳ್ಳಲಿದ್ದಾರೆ. ಕಾರ್ಯಕ್ರಮದಲ್ಲಿ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಕೂಡ ಭಾಗಿಯಾಗಲಿದ್ದಾರೆ.