ನವದೆಹಲಿ: ದೇಶದಾದ್ಯಂತ ಬ್ರಿಟನ್ನಿನ ರೂಪಾಂತರಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ 25ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿರುವುದಾಗಿ ಎಎನ್‌ಐ ಟ್ವೀಟ್ ಮಾಡಿದೆ.
ಪುಣೆಯಲ್ಲಿ 4, ದೆಹಲಿಯ ಐಜಿಐಬಿಯಲ್ಲಿ ಒಂದು ಹೊಸ ಪ್ರಕರಣಗಳು ಪತ್ತೆಯಾಗಿವೆ. ಎಲ್ಲ 25 ಮಂದಿಯನ್ನು ಐಸೋಲೇಶನ್‌ನಲ್ಲಿ ಇರಿಸಲಾಗಿದ್ದು, ಸರ್ಕಾರದಿಂದ ಚಿಕಿತ್ಸೆ ನೀಡಲಾಗುತ್ತಿದೆ.
ನಿನ್ನೆವರೆಗೆ ರಾಜ್ಯದಲ್ಲಿ 7 ಬ್ರಿಟನ್ ಕೊರೋನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದವು. ಇವತ್ತು ಯಾವುದೇ ಹೊಸ ಪ್ರಕರಣ ಬರದಿರುವುದು ನಿಟ್ಟುಸಿರುಬಿಡುವಂತೆ ಮಾಡಿದೆ.
ವಿಶ್ವದಾದ್ಯಂತ ಆತಂಕಕ್ಕೆ ಕಾರಣವಾಗಿರುವ ಹೊಸ ಮಾದರಿಯ ಕೊರೋನಾ ಈ ಹಿಂದಿನ ವೈರಾಣುಗಳಿಗಿಂತ ಶೇ 60ರಷ್ಟು ಹೆಚ್ಚು ವೇಗವಾಗಿ ಹರಡುವ ಹಿನ್ನೆಲೆಯಲ್ಲಿ ಎಲ್ಲೆಡೆ ಎಚ್ಚರಿಕೆ ವಹಿಸಲಾಗುತ್ತಿದೆ. ಈಗಾಗಲೇ ಬ್ರಿಟನ್ನಿನಿಂದ ಬರುವ ವಿಮಾನಗಳನ್ನು ಭಾರತ ಸೇರಿದಂತೆ ಹಲವು ರಾಷ್ಟ್ರಗಳು ನಿಷೇಧ ಮಾಡಿವೆ.
ಬ್ರಿಟನ್ ವೈರಸ್ ಹರಡದಂತೆ ತಡೆಯಲು ಬೆಂಗಳೂರು, ದೆಹಲಿ ಸೇರಿ ದೇಶದ ಪ್ರಮುಖ ನಗರಗಳಲ್ಲಿ ನೈಟ್ ಕರ್ಫ್ಯೂ ಹೇರುವ ಮೂಲಕ ಜನ ಗುಂಪು ಸೇರದಂತೆ ಕಟ್ಟೆಚ್ಚರ ವಹಿಸಲಾಗುತ್ತಿದೆ.