ಮುಳ್ಳೇರಿಯ: ಯಕ್ಷಗಾನ ಪ್ರಕಾರದಲ್ಲಿ ಬಣ್ಣದ ವೇಷವೆಂದು ಕರೆಯಲ್ಪಡುವ ರಾಕ್ಷಸ ಮತ್ತು ರಾಕ್ಷಸ ಗುಣಗಳನ್ನು ಹೊಂದಿರುವ ಪಾತ್ರಗಳಿಗೆ ವಿಶೇಷವಾದ ಸ್ಥಾನವಿದೆ. ಸಾಂಪ್ರದಾಯಿಕ ಯಕ್ಷಗಾನ ಬಯಲಾಟವು ಬಣ್ಣದ ವೇಷವೊಂದರ ಹೊರತು ಅಪೂರ್ಣವೆನ್ನುವುದು ಸಾರ್ವತ್ರಿಕ ಅಭಿಪ್ರಾಯ. ಇಂತಹ ಬಣ್ಣದ ವೇಷಗಳಲ್ಲಿ ಸರಿಸುಮಾರು ಏಳು ದಶಕಗಳ ಕಾಲ ಮಿಂಚಿದ ಒಬ್ಬ ಅದ್ಫುತ ಕಲಾವಿದ ಶ್ರೀ ಬಣ್ಣದ ಮಹಾಲಿಂಗ ಸಂಪಾಜೆಯವರು. ಕಾಸರಗೋಡು ಜಿಲ್ಲೆಯ ಚೆನ್ನಂಗೋಡಿನಲ್ಲಿ ಜನಿಸಿದ್ದ ಅವರು ತನ್ನ ಅದ್ಭುತ ಪ್ರತಿಭೆಯಿಂದಲೇ ಯಕ್ಷರಂಗವನ್ನು ಬೆರಗು ಹುಟ್ಟಿಸಿದ ಮಹಾನ್ ಕಲಾವಿದ. ಯಕ್ಷರಾತ್ರಿಗಳ ಈ ಪ್ರಚಂಡ ರಾಕ್ಷಸ 2004ರ ಮೇ.25 ರಂದು ಇಹಲೋಕದವನ್ನು ತ್ಯಜಿಸಿದಾಗ ಅವರ ಪ್ರಾಯ 91. ಅವರ ನೆನಪಿನಲ್ಲಿ 2017ರಲ್ಲಿ ಪುತ್ತೂರನ್ನು ಕೇಂದ್ರವಾಗಿರಿಸಿ ಸ್ಥಾಪಿಸಲ್ಟಟ್ಟ ಬಣ್ಣದ ಮಹಾಲಿಂಗ ಯಕ್ಷ ಪ್ರತಿಷ್ಠಾನದ ನಾಲ್ಕನೆಯ ವರ್ಷದ ಕಾರ್ಯಕ್ರಮವು ಡಿ.27 ರಂದು ಭಾನುವಾರ ಪೂರ್ವಾಹ್ಣ 11 ರಿಂದ ದೇಲಂಪಾಡಿ ಬನಾರಿಯ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಕೀರಿಕ್ಕಾಡು ಸ್ಮಾರಕ ಸಭಾಂಗಣದಲ್ಲಿ ನಡೆಯಲಿದೆ.
ಕೇರಳ ಸರ್ಕಾರದ ಕೋವಿಡ್ ಮಾನದಂಡಗಳಿಗನುಗುಣವಾಗಿ ನಡೆಯುವ ಈ ಕಾರ್ಯಕ್ರಮವನ್ನು ಬೆಳಿಗ್ಗೆ 11.ಕ್ಕೆ ಹಿರಿಯ ಪ್ರಸಂಗಕರ್ತ ಮತ್ತು ಯಕ್ಷಗಾನ ಗುರು ವಿಶ್ವವಿನೋದ ಬನಾರಿ ಉದ್ಘಾಟಿಸುವರು. ಪ್ರತಿಷ್ಠಾನದ ಅಧ್ಯಕ್ಷ ಗೋಪಾಲಕೃಷ್ಣ ಮಾಸ್ತರ್ ಪಂಜತ್ತೊಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಮಡಿಕೇರಿ ಆಕಾಶವಾಣಿಯ ಸುಬ್ರಾಯ ಸಂಪಾಜೆಯವರು ಬಣ್ಣದ ಮಹಾಲಿಂಗರವರ ಸಂಸ್ಮರಣೆಯನ್ನು ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ಕೇರಳ ಪಾರ್ತಿಸುಬ್ಬ ಯಕ್ಷಗಾನ ಕಲಾ ಕ್ಷೇತ್ರದ ಅಧ್ಯಕ್ಷ, ಹವ್ಯಾಸಿ ಯಕ್ಷಗಾನ ಕಲಾವಿದ ಎಂ. ಶಂಕರ ರೈ ಮಾಸ್ತರ್ ಭಾಗವಹಿಸುವರು. ಸಮಾರಂಭದಲ್ಲಿ ಕಟೀಲು ಮೇಳದ ನಿವೃತ್ತ ಬಣ್ಣದ ವೇಷಧಾರಿ ಸುಬ್ಬಣ್ಣ ಭಟ್ ಅಮೈ ಕಲ್ಮಡ್ಕ ಇವರಿಗೆ ಬಣ್ಣದ ಮಹಾಲಿಂಗ ಯಕ್ಷ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಇದೇ ಸಂದರ್ಭದಲ್ಲಿ ತೆಂಕುತಿಟ್ಟಿನ ಹಿರಿಯ ಬಣ್ಣದ ವೇಷಧಾರಿ ಬಣ್ಣದ ಸುಬ್ರಾಯ ಸಂಪಾಜೆಯವರನ್ನು ಸನ್ಮಾನಿಸಲಾಗುವುದು. ಸುಳ್ಯ ಪ್ರತಿಭಾ ವಿದ್ಯಾಲಯದ ಪ್ರಾಚಾರ್ಯ ವೆಂಕಟರಾಮ ಭಟ್ ಅಭಿನಂದನಾ ಭಾಷಣವನ್ನು ಮಾಡುವರು. ದೇಲಂಪಾಡಿ ಉನ್ನತ ಪ್ರೌಢಶಾಲೆಯ ಪ್ರಾಂಶುಪಾಲ ಡಿ. ರಾಮಣ್ಣ ಮಾಸ್ತರ್ ಶುಭಾಶಂಸನೆಗೈಯ್ಯುವರು. ಪ್ರತಿಷ್ಠಾನದ ಗೌರವಾಧ್ಯಕ್ಷ ನಿವೃತ್ತ ಉಪತಹಶೀಲ್ದಾರ್ ಮಹಾಲಿಂಗ ಮಂಗಳೂರು ಉಪಸ್ಥಿತರಿರುವರು. ಅಪರಾಹ್ಣ 2. ರಿಂದ ಪರಂಪರೆಯ ಮೇಳೈಸುವಿಕೆಯೊಂದಿಗೆ, ತೆಂಕು ಬಡಗು ತಿಟ್ಟುಗಳಲ್ಲಿ ಅತಿ ಹೆಚ್ಚು ಪ್ರದರ್ಶನಗಳನ್ನು ಕಂಡ, ಯಕ್ಷಗಾನ ಕುಲಪತಿ ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ ವಿರಚಿತ ಶಿವಪಂಚಾಕ್ಷರಿ ಮಹಿಮೆ - ಶ್ವೇತಕುಮಾರ ಚರಿತ್ರೆ ಸಂಪೂರ್ಣ ಕಥಾನಕದ ಯಕ್ಷಗಾನ ಬಯಲಾಟವು ಸುಪ್ರಸಿದ್ಧ ಹಿಮ್ಮೇಳ ಮತ್ತು ಮುಮ್ಮೇಳ ಕಲಾವಿದರ ಕೂಡುವಿಕೆಯಿಂದ ನಡೆಯಲಿದೆ. ತೆಂಕುತಿಟ್ಟು ಯಕ್ಷಗಾನದ ಬಣ್ಣದ ವೇಷ ಮತ್ತು ಪರಂಪರೆಗೆ ಹೆಚ್ಚಿನ ಒತ್ತು ಕೊಟ್ಟು ಆಯೋಜಿಸಲಾದ ಈ ಕಾರ್ಯಕ್ರಮಗಳು ಅನೇಕ ಪ್ರತ್ಯೇಕತೆಗಳೊಂದಿಗೆ ಅತ್ಯಂತ ವೈಶಿಷ್ಟ್ಯಪೂರ್ಣವಾಗಿ, ಬಣ್ಣದ ಮಹಾಲಿಂಗರ ವ್ಯಕ್ತಿತ್ವದ ಅನಾವರಣಕ್ಕೆ ಪೂರಕವಾಗಿ ನಡೆಯಲಿವೆ. ಆ ಮೂಲಕ ಯಕ್ಷರಂಗದ ದಿಗ್ಗಜರೊಬ್ಬರ ಔಚಿತ್ಯಪೂರ್ಣ ಸಂಸ್ಮರಣೆಯು ನಡೆಯಲಿದೆ.