ತಿರುವನಂತಪುರಂ: ಈ ಬಾರಿಯ ಶಬರಿಮಲೆ ಯಾತ್ರೆಯ ವೇಳೆ ಕುಡಿಯಲು ಹಾಗೂ ಇತರೆ ಚಟುವಟಿಕೆಗಳಿಗಾಗಿ ಸನ್ನಿಧಾನದಲ್ಲಿ ಅಗತ್ಯ ಪ್ರಮಾಣದಲ್ಲಿ ನೀರು ಸಂಗ್ರಹಿಸಲಾಗಿದೆ. ಅದೂ ಒಂದೇ ಒಂದು ಯುನಿಟ್ ವಿದ್ಯುತ್‌ಚ್ಛಕ್ತಿ ಅಥವಾ ಮೋಟಾರ್ ಬಳಕೆ ಮಾಡದೆಯೇ!
ಪೈಪ್‌ಲೈನ್‌ಗಳ ಮೂಲಕ ಕುನ್ನಾರ್ ಅಣೆಕಟ್ಟೆಯಿಂದ ಪಂಡಿಥಾವಲಂನಲ್ಲಿನ ಸನ್ನಿಧಾನಕ್ಕೆ 2 ಕೋಟಿ ಲೀಟರ್ ಕುಡಿಯುವ ನೀರು ಸಾಗಿಸಲಾಗಿದ್ದು, 9 ಬೃಹತ್ ಜಲಾಶಯಗಳಲ್ಲಿ ಶೇಖರಿಸಿಡಲಾಗಿದೆ.
ಶಬರಿಮಲೆಯ ಅತಿ ಎತ್ತರದ ಪ್ರದೇಶದಲ್ಲಿ ಜಲಾಶಯಗಳಿವೆ. ಈ ಜಲಾಶಯಗಳಿಂದ ಮೋಟಾರ್‌ಗಳನ್ನು ಬಳಸದೆಯೇ ವಿವಿಧ ಕಟ್ಟಡಗಳಿಗೆ ಗುರುತ್ವ ಬಲದ ತಂತ್ರವನ್ನು ಬಳಸಿಯೇ ನೀರು ಸಾಗಿಸಲಾಗಿದೆ. ಐದು ಜಲಾಶಯಗಳಲ್ಲಿ ಯಾವಾಗಲೂ ನೀರು ಸಂಗ್ರಹವಾಗಿರುತ್ತದೆ ಮತ್ತು ಇತರೆ ನಾಲ್ಕು ಜಲಾಶಯಗಳಿಂದ ನೀರು ಸರಬರಾಜು ಮಾಡಲಾಗುತ್ತದೆ.
ಯಾತ್ರೆಯ ಸಂದರ್ಭದಲ್ಲಿ ಸನ್ನಿಧಾನದಲ್ಲಿ ಪ್ರತಿ ದಿನ ಸಾಮಾನ್ಯವಾಗಿ 70 ಲಕ್ಷ ಲೀಟರ್ ನೀರು ಬೇಕಾಗುತ್ತದೆ. ಭಕ್ತರ ಸಂಖ್ಯೆ ಹೆಚ್ಚಿದ ದಿನಗಳಲ್ಲಿ ದಿನಕ್ಕೆ 1.15 ಕೋಟಿ ಲೀಟರ್‌ಗೂ ಅಧಿಕ ನೀರು ಬೇಕಾಗುತ್ತದೆ. ಎಲ್ಲ ಕಟ್ಟಡಗಳೂ, ಅನ್ನದಾನ ಮಂಟಪ, ಮೆಸ್‌ಗಳು ಹಾಗೂ ವಾಣಿಜ್ಯ ಸಂಕೀರ್ಣಗಳಿಗೆ ಪಂಡಿಥಾವಲಂನ ಜಲಾಶಯಗಳಿಂದ ನೀರು ಪೂರೈಸಲಾಗುತ್ತದೆ.
ಕುನ್ನಾರ್ ಅಣೆಕಟ್ಟು ಮತ್ತು ಚೆಕ್ ಡ್ಯಾಂ ಸನ್ನಿಧಾನದಿಂದ ಏಳು ಕಿಮೀ ದೂರದಲ್ಲಿರುವ ದಟ್ಟಾರಣ್ಯದಲ್ಲಿವೆ. ಅಣೆಕಟ್ಟಿಗಿಂತ ಕೆಳಗಿನ ಭಾಗದಲ್ಲಿರುವುದರಿಂದ ಇಲ್ಲಿಗೆ ನೀರು ಸಹಜವಾಗಿಯೇ ಹರಿದುಬರುತ್ತದೆ. 6 ಇಂಚ್ ಅಗಲದ ಎರಡು ಕಬ್ಬಿಣದ ಪೈಪ್‌ಗಳಲ್ಲಿ ನೀರು ಹರಿಸಲಾಗುತ್ತದೆ. ಈ ವರ್ಷ ಕಾಡಾನೆಗಳು ಮೂರು ಬಾರಿ ಈ ಪೈಪ್‌ಗಳನ್ನು ಧ್ವಂಸಪಡಿಸಿವೆ.
ಪ್ರತಿ ಎರಡು ಗಂಟೆಗೆ ಒಮ್ಮೆ ಈ ಜಲಾಶಯದ ನೀರನ್ನು ಕ್ಲೋರಿನೇಟ್ ಮಾಡಲಾಗುತ್ತದೆ. ಜಲಸಂಪನ್ಮೂಲದ ಅಧಿಕಾರಿಗಳು ಪ್ರತಿದಿನ ನೀರಿನ ಗುಣಮಟ್ಟವನ್ನು ಪರಿಶೀಲಿಸುತ್ತಾರೆ. ಹೊಸದಾಗಿ ನಿರ್ಮಿಸಲಾಗಿರುವ ಜಲಾಶಯದಲ್ಲಿ 70 ಲಕ್ಷ ಲೀಟರ್ ನೀರು ಸಂಗ್ರಹಿಸಬಹುದಾಗಿದೆ.