ಸಾಖಿರ್(ಬಹ್ರೇನ್): ಭಾರತದ ಪ್ರತಿಭಾನ್ವಿತ ಹಾಗೂ ಯುವ ಚಾಲಕ ಜೆಹಾನ್ ದಾರುವಾಲಾ ಫಾರ್ಮುಲಾ 2 ರೇಸ್ ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ.
ಭಾನುವಾರ (ಡಿಸೆಂಬರ್ 7) ಬಹ್ರೇನ್ ನಲ್ಲಿ ನಡೆದ ಸಾಖಿರ್ ಗ್ರ್ಯಾಂಡ್ ಪ್ರಿ ಫಾರ್ಮುಲಾ 2 ರೇಸ್ ನಲ್ಲಿ ಚೊಚ್ಚಲ ಪ್ರಶಸ್ತಿ ಗೆಲ್ಲುವುದರೊಂದಿಗೆ ಈ ಪ್ರಶಸ್ತಿ ಜಯಿಸಿದ ಭಾರತದ ಮೊದಲ ಚಾಲಕ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.
ಫಾರ್ಮುಲಾ 2 ಚಾಂಪಿಯನ್ ಜರ್ಮನಿಯ ಮಿಕ್ ಶುಮಾಕರ್ ಮತ್ತು ಬ್ರಿಟಿಷ್ ರೇಸರ್ ಡೇನಿಯಲ್ ಟಿಕ್ಟಮ್ ವಿರುದ್ಧದ ರೋಚಕ ಸ್ಪರ್ಧೆಯಲ್ಲಿ 22ರ ಹರೆಯದ ಭಾರತೀಯ ಜೆಹಾನ್ ದಾರುವಾಲಾ ಅವರು ಅಗ್ರ ಸ್ಥಾನಿ ಅಲಂಕರಿಸುವ ಮೂಲಕ ಗಮನ ಸೆಳೆದಿದ್ದಾರೆ.
ಫಾರ್ಮುಲಾ 1ರ ಬೆಂಬಲ ಸ್ಪರ್ಧೆಯಾಗಿದ್ದ ಈ ಸ್ಪರ್ಧೆಯಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ 2020ನೇ ವರ್ಷವನ್ನು ಜೆಹಾನ್ ಉತ್ತಮ ರೀತಿಯಲ್ಲಿ ಕೊನೆಗೊಳಿಸಿದ್ದಾರೆ. ಫೋರ್ಸ್ ಇಂಡಿಯಾ ಎಫ್ 1 ತಂಡದ ರಕ್ಷಕರಾಗಿದ್ದ ಜೆಹಾನ್ ಅವರು ಕಾರ್ಲಿನ್ ಮೋಟಾರ್ ಸ್ಪೋರ್ಟ್ಸ್ ಜತೆ ಫಾರ್ಮುಲಾ-2 ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ.